ಜಿಲ್ಲೆ

ಚಿರತೆ ದಾಳಿಗೆ ಮೇಕೆ ಬಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಹಲಗೂರು: ಸಮೀಪದ ಎನ್.ಹಲಸಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ.

ಗ್ರಾಮದ ರತ್ನಮ್ಮ ಅವರ ಕೊಟ್ಟಿಗೆಯಲ್ಲಿ ಎಂದಿನಂತೆ ಮೇಕೆಯನ್ನು ಕಟ್ಟಿ ಹಾಕಲಾಗಿತ್ತು. ರಾತ್ರಿ 2 ಗಂಟೆಯ ಸುಮಾರಿಗೆ ಬಂದ ಚಿರತೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆಯ ಮೇಲೆ ದಾಳಿ ಮಾಡಿದೆ. ಮೇಕೆ ಅರಚುವ ಶಬ್ದ ಕೇಳಿ ಮನೆಯ ಹೊರಗಡೆ ಬಂದು ನೋಡಿದಾಗ ಮೇಕೆಯ ಕುತ್ತಿಗೆ ಭಾಗ ಹಿಡಿದಿದ್ದು, ಮಾಲೀಕರನ್ನು ನೋಡಿದ ತಕ್ಷಣ ಕಾಲ್ಕಿತ್ತಿದೆ. ಗುರುವಾರ ಬೆಳಗ್ಗೆ ಗಸ್ತು ಅರಣ್ಯ ಪಾಲಕ ಎಂ.ಜೆ.ಉಮೇಶ್, ಪಶುಪಾಲನಾ ಇಲಾಖೆ ಮುಖ್ಯ ಪಶು ವೈದ್ಯಕೀಯ ಸಿಬ್ಬಂದಿ ಮಂಜು ಸ್ಥಳಕ್ಕೆ ಆಗಮಿಸಿ ಮೇಕೆಯ ಮರಣೋತ್ತರ ಪರೀಕ್ಷೆ ನಡೆಸಿದರು.

ಹಲವಾರು ದಿನಗಳಿಂದ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿಯಿಂದ ಹಲವು ಕಡೆಗಳಲ್ಲಿ ಕುರಿ, ಮೇಕೆಗಳು ಸಾವೀಗೀಡಾಗಿವೆ. ರೈತರು ಮೇಕೆ ಸಾಕಣೆಯನ್ನೇ ಉಪ ಕಸುಬಾಗಿ ಮಾಡಿಕೊಂಡಿದ್ದಾರೆ. ಚಿರತೆ ದಾಳಿಯಿಂದ ಸಾಕಣೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನು ಇಡಲು ವ್ಯವಸ್ಥೆ ಮಾಡಬೇಕು. ಜನವಸತಿ ಪ್ರದೇಶಗಳತ್ತ ದಾಳಿ ಮಾಡುವ ಕಾಡು ಪ್ರಾಣಿಗಳ ತಡೆಗೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.