ಜಿಲ್ಲೆ

ಬಕ್ರೀದ್​ಗೆ ಕುರಿ-ಟಗರು ಖರೀದಿ ಬಲು ಜೋರು! ದರ ಹೆಚ್ಚಾಯ್ತು ಎನ್ನುತ್ತಿದ್ದಾರೆ ಗ್ರಾಹಕರು

ರಾಮ ಕಿಶನ್​ ಕೆ.ವಿ. ಬೆಂಗಳೂರು
ಬಕ್ರೀದ್​ ಹಬ್ಬದ ಹಿನ್ನೆಲೆಯಲ್ಲಿ ಕುರಿ, ಮೇಕೆಗಳ ವ್ಯಾಪಾರ ಜೋರಾಗಿದೆ. ಸೋಮವಾರ ಹಬ್ಬವಿರುವ ಕಾರಣಕ್ಕೆ ಭಾನುವಾರ ಚಾಮರಾಜಪೇಟೆಯ ಆಟದ ಮೈದಾನದ ಸುತ್ತಮುತ್ತ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು. ಬೆಳಗ್ಗಿನಿಂದಲೇ ಗ್ರಾಹಕರು ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಮೈಸೂರು ರಸ್ತೆಯ ಬಿ.ಬಿ.ಜಂಕ್ಷನ್​ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯೂ ಕಂಡು ಬಂದಿತ್ತು.

ವಿವಿಧ ಊರುಗಳಿಂದ ಕುರಿಗಳನ್ನು ಗಾಡಿಯಲ್ಲಿ ತುಂಬಿಸಿಕೊಂಡು ಬಂದಿದ್ದ ವ್ಯಾಪಾರಿಗಳು, ಕಳೆದ ನಾಲ್ಕೆ$ದು ದಿನಗಳಿಂದ ಈದ್ಗಾ ಮೈದಾನ ಬಳಿ ವಹಿವಾಟು ನಡೆಸುತ್ತಿದ್ದರು. ಹೀಗಾಗಿ ನಗರದ ವಿವಿಧ ಭಾಗದ ಮಂದಿ ಚಾಮರಾಜಪೇಟೆ ಕಡೆಗೆ ಬಂದು ಮೇಕೆ ಖರೀದಿಸುತ್ತಿದ್ದರು. ಕೆಲವರಂತು ಲಕ್ಷ ರೂಪಾಯಿ ನೀಡಿ ಕುರಿ&ಟಗರು ಖರೀದಿ ಮಾಡಿದ್ದಾರೆ.

ಆರು ತಿಂಗಳ ಮರಿಯಿಂದ ಹಿಡಿದು 2-3 ವರ್ಷದ ಕುರಿ, ಟಗರುಗಳು ಮಾರಾಟಕ್ಕಿದ್ದವು. ಕನಿಷ್ಠ 7 ಸಾವಿರದಿಂದ ಹಿಡಿದು ಗರಿಷ್ಠ 80 ಸಾವಿರ ರೂ. ವರೆಗೂ ಬೆಲೆ ನಿಗದಿಗೊಂಡಿದ್ದವು. ಹೀಗಾಗಿ ಗ್ರಾಹಕರು ವ್ಯಾಪಾರಿಗಳೊಂದಿಗೆ ಚೌಕಾಸಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಕುರಿಗಳು 20-30 ಸಾವಿರ ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದವು. ಭಾನುವಾರ ರಾತ್ರಿ 11 ಗಂಟೆವರೆಗೂ ವ್ಯಾಪಾರ ನಡೆದಿದೆ.

ಮಂಡ್ಯ, ಹಾಸನ, ಬನ್ನೂರು, ಶ್ರೀರಂಗಪಟ್ಟಣ, ನಂಜನಗೂಡು, ಹುಣಸೂರು, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಭಾಗಗಳಿಂದ ಬಂದ ವ್ಯಾಪಾರಿಗಳು ಮಾರಾಟದಲ್ಲಿ ನಿರತರಾಗಿದ್ದರು. "ಹಬ್ಬದ ಹಿಂದಿನ ದಿನವಾದ ಕಾರಣಕ್ಕೆ ಸಂಜೆಯಾಗುತ್ತಿದ್ದಂತೆ ಕುರಿ ದರ 2 ಸಾವಿರ ರೂ.ನಷ್ಟು ಏರಿಸಿದ್ದಾರೆ. ಮಧ್ಯಮ ಗಾತ್ರದ ಕುರಿಗೆ 18&25 ಸಾವಿರ ರೂ. ವರೆಗೆ ಬೆಲೆ ಹೇಳುತ್ತಿದ್ದಾರೆ. ಚೌಕಾಸಿ ಒಪ್ಪುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದರ ಹೆಚ್ಚಾಗಿದೆ' ಎಂದು ಗೋರಿಪಾಳ್ಯದಿಂದ ಖರೀದಿಗೆ ಬಂದಿದ್ದ ಗ್ರಾಹಕ ಸುಲ್ತಾನ್​ ಪಾಷಾ ತಿಳಿಸಿದರು.

ವಿವಿಧ ತಳಿಗಳು

ಬಂಡೂರು ಕುರಿ, ಅಮಿನ್​ ಗಾಡ್​, ನಾಟಿ ತಳಿ, ಪಾವಗಡ, ಜಮುನ ಪುರಿ, ಬಾಗೇವಾಡಿ ಕುರಿ, ಮೈಲಾರಿ, ಕಾಶ್ಮೀರಿ ಕುರಿ, ಹೈದರಾಬಾದಿ ತಳಿ ಸೇರಿದಂತೆ ವಿವಿಧ ತಳಿಯ ಕುರಿಗಳು ಮಾರಾಟವಾಗುತ್ತಿದ್ದವು. ಒಟ್ಟಾರೆಯಾಗಿ 10 ಸಾವಿರಕ್ಕೂ ಅಧಿಕ ಟಗರು-ಕುರಿಗಳು ಮಾರಾಟವಾಗಿವೆ ಎಂದು ಅಂದಾಜಿಸಲಾಗಿದೆ.

ಬಕ್ರೀದ್​ ಹಬ್ಬದ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಮೂರು ದಿನದಿಂದ ವ್ಯಾಪಾರ ನಡೆಸುತ್ತಿದ್ದೇವೆ. ಒಂದು ಮರಿಗೆ 25 ಸಾವಿರ ರೂ.ನಂತೆ ಹಸನಗಢ ತಳಿ ಮಾರಾಟ ಮಾಡುತ್ತಿದ್ದೇವೆ. 25 ಕುರಿ ತಂದ್ದಿದ್ದೆ. ಕಳೆದ ವರ್ಷಕ್ಕ ಹೋಲಿಸಿದರೆ ಈ ಬಾರಿ ವ್ಯಾಪಾರ ಕಡಿಮೆ.
- ಲೊಕೇಶ್​, ಹಾಸನ

ಮೂರು ದಿನದಿಂದ ವ್ಯಾಪಾರ ನಡೆಸುತ್ತಿದ್ದು, ಒಂದು ಕುರಿಗೆ 17-25 ಸಾವಿರ ರೂ. ವರೆಗೆ ಹೇಳುತ್ತಿದ್ದೇವೆ. ಭಾನುವಾರವಾದ್ದರಿಂದ ಬೆಳಗ್ಗಿನಿಂದಲೇ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಆದರೆ ನಿರೀಕ್ಷಿಸಿದಷ್ಟು ದರದಲ್ಲಿ ವಹಿವಾಟು ನಡೆಯುತ್ತಿಲ್ಲ. ಚರ್ಚೆಗಳಿದು, ದರ ಕಡಿಮೆ ಮಾಡಿದರಷ್ಟೇ ಖರೀದಿಸುತ್ತಾರೆ.
- ಗಿರೀಶ್​ ಮಂಡ್ಯ

ಊರಿಂದ ಬರುತ್ತಾ 25 ಕುರಿ ತಂದಿದ್ದೆ. ಮೂರು ದಿನಗಳಲ್ಲಿ 23 ಕುರಿಗಳು ಮಾರಾಟವಾಗಿದೆ. 2 ಕುರಿಗಳ ಕಾಲಿಗೆ ಗಾಯವಾದ್ದರಿಂದ ಹಾಗೇ ಉಳಿದುಕೊಂಡಿವೆ. ಖರ್ಚು&ವೆಚ್ಚವೆಲ್ಲ ಕಳೆದು ಸೀಮಿತ ದರ ನಿಗದಿಪಡಿಸಿದ್ದರಿಂದ, ನಿರೀಸಿದಷ್ಟು ವ್ಯಾಪಾರ ನಡೆದಿದೆ.
- ಕೆಂಪರಾಜು, ಮಧುಗಿರಿ

18 ಸಾವಿರ ರೂ.ಗೆ ಮಾರಾಟವಾಗುವ ಕುರಿಗೆ 25 ಸಾವಿರ ರೂ. ಹೇಳುತ್ತಿದ್ದಾರೆ. ಹಬ್ಬದ ಕಾರಣಕ್ಕೆ ಬೆಲೆ ಎಷ್ಟಿದ್ದರೂ, ಖರೀದಿಸುತ್ತಾರೆ ಎಂಬದು ವ್ಯಾಪಾರಿಗಳಿಗೆ ಖಚಿತವಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ಹೆಚ್ಚಳವಾಗಿದೆ.
- ಹದೀದ್​, ಬೆನ್ಸಂಟ್​ ಟೌನ್​

ಬಕ್ರೀದ್​ ಹಬ್ಬದ ಸಂದರ್ಭದಲ್ಲಿ ಕುರಿ&ಟಗರಿಗೆ ಹೆಚ್ಚು ಬೇಡಿಕೆ. ಕಳೆದ ವರ್ಷ 22 ಸಾವಿರ ರೂ. ನೀಡಿ ಕುರಿ ಖರೀದಿಸಿದ್ದೆ. ಈ ಬಾರಿ 30 ಸಾವಿರ ರೂ. ದರದ ಕುರಿ ಖರೀದಿಸಿದ್ದೇನೆ.
- ಸೈಯದ್​ ಖಾದರ್​, ಅತ್ತಿಬೆಲೆ