ಜಿಲ್ಲೆ

ಗುರುವಿನ ಕೃಪೆ ಇಲ್ಲದೆ ಗುರಿ ಮುಟ್ಟಲಾಗದು: ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅಭಿಮತ

ಮೈಸೂರು: ಗುರುವಿನ ಕೃಪೆ ಇಲ್ಲದೆ ನಾವು ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಹೀಗಾಗಿ ನಿತ್ಯ ಗುರು ಸ್ಮರಣೆ ಮಾಡಬೇಕು ಎಂದು ಅವದೂತ ಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.


ಗುರು ಪೂರ್ಣಿಮೆ ಪ್ರಯುಕ್ತ ಅವಧೂತ ದತ್ತ ಪೀಠದ ಪ್ರಾರ್ಥನಾ ಮಂದಿರದಲ್ಲಿ ಪೂಜಾ ಕಾರ್ಯ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ನಮ್ಮ ಗುರಿ ಮುಟ್ಟಲು ಭಕ್ತಿ, ಶ್ರದ್ಧೆ ಇರಬೇಕು. ಅಂತಹವರಿಗೆ ಮಾತ್ರ ಗುರು ಕೃಪೆ ಸಿಗುತ್ತದೆ ಎಂದು ತಿಳಿಸಿದರು.


ಇಂದು ವ್ಯಾಸ ಪೂರ್ಣಿಮೆ. ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದು ಬಂದು ನಮಗೆ ಜ್ಞಾನ ನೀಡಿದ್ದಾನೆ. ಇದು ನಿಜಕ್ಕೂ ಒಂದು ಚಮತ್ಕಾರ. ಎಲ್ಲವೂ ಇರುತ್ತದೆ. ಆದರೆ ಜ್ಞಾನವೇ ಇಲ್ಲದಿದ್ದರೆ ಏನೂ ಪ್ರಯೋಜನ ಆಗಲಾರದು. ಒಂದು ವಜ್ರವನ್ನು ಮಗುವಿನ ಕೈಗೆ ಕೊಟ್ಟರೆ ಅದು ಚೆಂಡೆಂದು ಆಟವಾಡುತ್ತದೆ. ಅದೇ ವಜ್ರವನ್ನು ಬಲ್ಲವರಿಗೆ ಕೊಟ್ಟರೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.


ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು. ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು. ಜ್ಞಾನ ಪ್ರತಿಯೊಬ್ಬರಿಗೂ ಬೇಕೇ ಬೇಕು. ನಮಗೆಲ್ಲರಿಗೂ ಶ್ರೀಕೃಷ್ಣನೇ ಮೊದಲ ಗುರು. ಯುದ್ಧ ಮಾಡಿಸಿದ ಕೃಷ್ಣ ಬೇರೆ, ಗೀತ ಬೋಧನೆ ಮಾಡಿದ ಕೃಷ್ಣ ಬೇರೆ ಎಂದು ನಾವು ತಿಳಿದಿದ್ದೇವೆ. ಆದರೆ ಅದೆಲ್ಲ ಮಾಯೆ ಇಬ್ಬರೂ ಒಂದೇ. ಧರ್ಮ ಸಂರಕ್ಷಣೆಗೆ ಕೃಷ್ಣ ಯುದ್ಧ ಮಾಡಿದ ಜ್ಞಾನ ಸಂಪಾದನೆಗೆ ಗೀತ ಬೋಧನೆ ಮಾಡಿದ ಎಂದು ವಿವರಿಸಿದರು.


ಚಿಕಾಗೋದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು 8,000 ಜನರಿಂದ ಗೀತೆ ಪಠಣ ಮಾಡಿಸಿದ್ದಾರೆ. ಇದೊಂದು ಅದ್ಭುತ ಕ್ಷಣ. ಈ ಕಲಿಯುಗದಲ್ಲೂ ಗುರುವಿನ ಕೃಪೆಯಿಂದ ಇಂತಹದ್ದನ್ನು ಮಾತ್ರ ಮಾಡಲು ಸಾಧ್ಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.


ನಮ್ಮ ಸನಾತನ ಧರ್ಮ ಕಾಪಾಡಲು ಗುರು ಕೃಪೆ ಬೇಕೇ ಬೇಕು. ಭಗವಂತನಿಗೆ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲ. ಜ್ಞಾನವನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು. ಗುರಿ ಮುಟ್ಟಲು ನಮಗೆಲ್ಲ ಜ್ಞಾನ ಮಾರ್ಗವೇ ಮುಖ್ಯ ಎಂದರು.


ವೇದಾಂತ, ವೈರಾಗ್ಯದಿಂದ ಮಾತ್ರ ಮಾನವನ ಉದ್ಧಾರ ಸಾಧ್ಯ. ಆದ್ದರಿಂದ ವೇದವ್ಯಾಸರನ್ನು ಮರೆಯಬಾರದು.ಅದೇ ರೀತಿ ಶಂಕರಾಚಾರ್ಯರನ್ನು ನಾವು ಮರೆಯಬಾರದು. ಅವರು ಇಲ್ಲದಿದ್ದರೆ ಭಗವದ್ಗೀತೆಯೇ ಇರುತ್ತಿರಲಿಲ್ಲ. ಗುರುಕೃಪೆಯಿಂದ ಅನುಭವ ಬರುತ್ತದೆ. ನಮಗೆ ಗುರು ಕೃಪೆ ಸಿಗುತ್ತದೆ. ಸ್ಮರಣೆ ಇದ್ದಲ್ಲಿ ಮರಣದ ಭಯ ಇರುವುದಿಲ್ಲ. ನಿರಂತರ ಭಗವಂತನ ಸ್ಮರಣೆ ಮಾಡಲು ಚಾತುರ್ಮಾಸ್ಯ ಅತ್ಯುತ್ತಮ ಎಂದರು.

ಶತಶ್ಲೋಕಿ ರಾಮಾಯಣ ಬ್ರೈಲ್ ಲಿಪಿಯಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಶ್ರೀಗಳು ಮತ್ತು ಶಾಸಕ ಟಿ.ಎಸ್.ಶ್ರೀವತ್ಸ ಬಿಡುಗಡೆ ಮಾಡಿದರು.

ಧಾರ್ಮಿಕ ವಿಧಿವಿಧಾನ


ಗುರುಪೂರ್ಣಿಮೆ ಪ್ರಯುಕ್ತ ದತ್ತ ವಿಜಯಾನಂದ ತೀರ್ಥ ಸಾಮೀಜಿ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಶ್ರೀ ವೆಂಕಟೇಶ್ವರ ಸನ್ನಿಧಿ ಮತ್ತು ಕಾರ್ಯಸಿದ್ಧಿ ಹನುಮಾನ್ ಮಂದಿರಗಳಲ್ಲಿ ಪೂಜೆ ನೆರವೇರಿಸಿದರು. ನಂತರ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದತ್ತ ಮಂದಿರಕ್ಕೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ತರಲಾಯಿತು.


ಗೋಪೂಜೆ ನೆರವೇರಿಸಿದ ನಂತರ ಶ್ರೀಗಳು ಪ್ರಾರ್ಥನಾ ಮಂದಿರದಲ್ಲಿರುವ ಎಲ್ಲ ದೇವರಿಗೆ ಪೂಜೆ ಸಲ್ಲಿಸಿದರು. ಸಂಕಲ್ಪ ಮಾಡಿ ಭಕ್ತರಿಂದಲೂ ಸಂಕಲ್ಪ ಮಾಡಿಸಿದರು. ಗುರು ಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಮಂತ್ರವನ್ನು ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಪಠಿಸಬೇಕೆಂದು ಶ್ರೀಗಳು ತಿಳಿಸಿದರು. ಶ್ರೀಗಳು 21 ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ಸವವೂ ನೆರವೇರಿತು.

ರಾಜ್ಯ, ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಆಗಮಿಸಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.