ವಿಜಯವಾಣಿ ಸುದ್ದಿಜಾಲ ಧಾರವಾಡ
ಉತ್ತಮ ಕಲಾವಿದರಾಗಲು ಗುರಿಯ ಜತೆಗೆ ಗುರುವೂ ಮುಖ್ಯ. ವಿದ್ಯಾರ್ಥಿಗಳು ಗುರಿಯ ಆಯ್ಕೆಯನ್ನು ತಮ್ಮ ಸಾಮರ್ಥ್ಯದ ಅನುಸಾರ ಖಚಿತ ಪಡಿಸಿಕೊಳ್ಳಬೇಕು. ಇದರಲ್ಲಿ ಪಾಲಕರ ಜವಾಬ್ದಾರಿಯೂ ಇದೆ. ಬಾಲ್ಯದ ಆಟಗಳನ್ನು ಕಂಡ ಪಾಲಕರು ತಮ್ಮ ಮಗು ಎಲ್ಲವೂ ಆಗಬೇಕು ಎಂದು ಬಯಸುವುದು ಸರಿಯಲ್ಲ ಎಂದು ಹೈದರಾಬಾದಿನ ಕಥಕ್ ನೃತ್ಯ ಕಲಾವಿದೆ ಮುಕ್ತಿ ಶ್ರೀ ಅಭಿಪ್ರಾಯ ಪಟ್ಟರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ, ಸಪ್ತಕ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಕಥಕ್ ನೃತ್ಯ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಗುವಿನಲ್ಲಿ ಆಸಕ್ತಿ, ಸಾಮರ್ಥ್ಯಗಳಿಗೆ ಅನುಗುಣವಾದ ಕಲೆಯಡೆಗೆ ಪ್ರೋತ್ಸಾಹ ನೀಡಬೇಕು. ಯಾವುದೇ ಕಲೆ ಸಿದ್ಧಿಸಲು ದೈಹಿಕ, ಮಾನಸಿಕ ಬಲಗಳೊಂದಿಗೆ ಏಕಾಗ್ರತೆ ಅಗತ್ಯ. ಬಾಲ್ಯದ ಕಲೆಯನ್ನು ಜೀವನಪರ್ಯಂತ ಮುಂದುವರಿಸಲು ಸಮಾನ ಮನಸ್ಕ ಸಂಗಾತಿಯ ಅಗತ್ಯವಿದೆ. ಅಂದಾಗ ಮಾತ್ರ ನಮ್ಮ ಕಲೆ ಹಾಗೂ ಕುಟುಂಬ ಎರಡನ್ನೂ ನಿರ್ವಹಣೆ ಮಾಡಲು ಸಾಧ್ಯ ಎಂದರು.
ವಿದುಷಿ ವಿಜೇತಾ ವೆರ್ಣೇಕರ ಮಾತನಾಡಿ, ಕಥಕ್ ಕಲೆ ಒಂದು ವಿಶಿಷ್ಟ ನೃತ್ಯ ಕಲೆ. ಕೇವಲ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಿರುವ ಈ ಕಲೆಯನ್ನು ದಕ್ಷಿಣ ಭಾರತದಲ್ಲೂ ಹೆಚ್ಚು ಪ್ರಚಲಿತಗೊಳಿಸುವಲ್ಲಿ ಗುರುಗಳ ಮತ್ತು ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದರು.
ಜಿ.ಎಸ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಡಾ. ಶಶಿಧರ ನರೇಂದ್ರ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಸುಜಾತಾ ಗುರವ, ಸವಿತಾ ಹೆಗಡೆ, ರಾಜೇಶ್ವರಿ ಗುದಗನವರ, ಮುಕ್ತಾ ವೆರ್ಣೇಕರ, ಡಾ.ಎ.ಎಲ್.ದೇಸಾಯಿ, ಡಾ.ಗುರುಬಸವ ಮಹಾಮನೆ, ಪಂ.ಅಲ್ಲಮಪ್ರಭು ಕಡಕೋಳ, ದೀಪಕ ಕುಲಕರ್ಣಿ, ಸಿ.ಎಸ್.ಪಾಟೀಲ, ಏಕಬೋಟೆ, ಇತರರು ಇದ್ದರು.
ವೀರಣ್ಣ ಪತ್ತಾರ ಸ್ವಾಗತಿಸಿದರು. ಮಲ್ಲಿಕಾರ್ಜುನ ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು. ಬಾಳಿಕಾಯಿ ವಂದಿಸಿದರು.
ನಂತರ ವಿದುಷಿ ಮುಕ್ತಿ ಶ್ರೀ ಮತ್ತು ಆಯುಷಿ ದೀಕ್ಷಿತ ಕಥಕ್ ನೃತ್ಯದಲ್ಲಿ ತ್ರಿದೇವತಾ ವಂದನೆಯೋಂದಿಗೆ ಆರಂಭಿಸಿ, ಕಥಕ್ ತೀನ್ ತಾಲ್ ನಟವರಿಯಲ್ಲಿ ಥಾಟ್, ಆಮದ್, ತೋಡಾ, ಪರನ್, ಅನೇಕ ರೀತಿಯ ಬಾಂಟ್‌ಗಳನ್ನು ಅದ್ಭುತವಾಗಿ ಪ್ರದರ್ಶಿಸಿದರು.