ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನರಿಂಗಾನ ಗ್ರಾಮದಲ್ಲೇ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕೆಲಸ ನಡೆಯುತ್ತಿದ್ದು, ಸಮರ್ಪಕ ನಿರ್ವಹಣೆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಅಕ್ಟೋಬರ್ 2ರಂದು ಕಾರ್ಯಾರಂಭಿಸಲು ಯೋಚಿಸಲಾಗಿದೆ ಎಂದು ನರಿಂಗಾನ ಗ್ರಾಪಂ ಅಧ್ಯಕ್ಷ ಎಂ.ಬಿ.ನವಾಝ್ ಕಲ್ಲರಕೋಡಿ ಹೇಳಿದರು. ಮಂಗಳವಾರ ನರಿಂಗಾನ ಗ್ರಾಪಂ 2025-26ನೇ ಸಾಲಿನ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋವಾ ರಾಜ್ಯದಲ್ಲಿ ಪ್ರತಿಯೊಂದು ಗ್ರಾಪಂನಲ್ಲೂ ನ್ಯಾಪ್‌ಕಿನ್ ಸುಡುವ ಯಂತ್ರ ಅಳವಡಿಸಲಾಗಿದ್ದು, ಅದೇ ಕಂಪನಿ ಯಂತ್ರಗಳನ್ನು ಇಲ್ಲೂ ಅಳವಡಿಸಲಾಗುವುದು. ದ್ರವತ್ಯಾಜ್ಯ ನಿರ್ವಹಣೆ ಜತೆ ಒಂದು ಕೋಟಿ ವೆಚ್ಚದಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣ ಆಗಲಿದ್ದು ಶೇ.75 ಕೆಲಸ ಮುಗಿದಿದೆ ಎಂದು ತಿಳಿಸಿದರು.
1930ಕ್ಕೆ ಕರೆ ಮಾಡಿ: ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದರೆ ಒಂದು ಗಂಟೆಯೊಳಗೆ ಸೈಬರ್ ಕ್ರೈಂ 1930ಗೆ ಕರೆ ಮಾಡಿ ಮಾಹಿತಿ ನೀಡಿದರೆ ಖಾತೆ ಜಪ್ತಿ ಮಾಡುತ್ತಾರೆ, ಬಳಿಕ ಠಾಣೆಗೆ ಹೋಗಿ ದೂರು ನೀಡಬಹುದು. ಏನಾದರೂ ಸಮಸ್ಯೆ ಇದ್ದರೆ 112ಕ್ಕೆ ಕರೆ ಮಾಡಿದರೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆಂದು ಪೊಲೀಸ್ ಇಲಾಖೆಯ ರಮೇಶ್ ತಿಳಿಸಿದರು.
ಎರಡು ಗಂಟೆಯಲ್ಲೇ ಸಭೆ ಮುಕ್ತಾಯ!: ಹೆಚ್ಚಿನ ಕಡೆಗಳಲ್ಲಿ ಗ್ರಾಮಸಭೆಗಳಲ್ಲಿ ಅನವಶ್ಯಕ ಚೀರಾಟ, ಕೂಗಾಟ, ಆರೋಪ, ಪ್ರತ್ಯಾರೋಪ ದಿನವಿಡೀ ನಡೆಯುವುದು ಸಾಮಾನ್ಯ. ಮಂಗಳವಾರ ನಡೆದ ನರಿಂಗಾನ ಗ್ರಾಪಂ ಆಡಳಿತ ಅವಧಿ ಕೊನೆಯ ಗ್ರಾಮಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂತಹ ಪ್ರಸಂಗ ಕಂಡು ಬರದೆ, ಗ್ರಾಮಸ್ಥರು ಅಗತ್ಯ ವಿಚಾರದಲ್ಲಿ ಮಾತ್ರ ಮಾತನಾಡಿದರು. ಇದರಿಂದಾಗಿ ಸುಲಲಿತವಾಗಿ ಗ್ರಾಮಸಭೆ ನಡೆದು ಎರಡು ಗಂಟೆಯಲ್ಲೇ ಮುಕ್ತಾಯಗೊಂಡಿತು.
ಪ್ರತಿಯೊಬ್ಬರೂ ಪ್ರಮಾಣಪತ್ರ ನೀಡಿ: ಗ್ರಾಮದಲ್ಲಿ ಸುಮಾರು 700 ಮನೆಗಳಿಂದ ಸ್ವಚ್ಛ ಮನೆ, ಸ್ವಯಂಘೋಷಣಾ ಪ್ರಮಾಣ ಪತ್ರ ಪಂಚಾಯಿತಿ ಪಡೆದಿದೆ. ಇದು ಯಾವುದೇ ಗ್ರಾಪಂ ಮಾಡದ ಪ್ರಯತ್ನ ಆಗಿದೆ. ಗ್ರಾಮದ ಪ್ರತಿಯೊಬ್ಬರೂ ಇಂತಹ ಪ್ರಮಾಣಪತ್ರ ನೀಡಿದರೆ ರಾಜ್ಯಕ್ಕೇ ಉತ್ತಮ ಸಂದೇಶ ನೀಡುವಂತಾಗುತ್ತದೆ. ಮುಂದಿನ ದಿನಗಳಲ್ಲಿ ಮನೆಯಂಗಳದಲ್ಲಿ ಪೊಲೀಸ್ ಮಾಹಿತಿ ಕಾರ್ಯಕ್ರಮ ನಡೆಸೋಣ ಎಂದು ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಮ್ತಾಝ್ ಬೇಗಂ ನೋಡೆಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಮೆಸ್ಕಾಂನ ಶಿವಪ್ರಸಾದ್, ಕೃಷಿ ಇಲಾಖೆ ಹನುಮಂತ ಕಾಳಡಿ, ವೈದ್ಯಾಧಿಕಾರಿ ಆಯಿಶಾ ರೀಮಾ, ಸಮಾಜ ಕಲ್ಯಾಣ ಇಲಾಖೆ ಸಂಪತ್ ಕುಮಾರ್, ಪಶು ಸಂಗೋಪನೆ ಇಲಾಖೆಯ ಶಶಿಕಲಾ, ಸಮುದಾಯ ಆರೋಗ್ಯಾಧಿಕಾರಿ ಎಸ್.ಶಾಲಿನಿ, ಗ್ರಂಥಪಾಲಕಿ ಆಶಲತಾ, ಶಿಕ್ಷಣ ಇಲಾಖೆ ಮಲ್ಲಿಕಾರ್ಜುನ, ಗ್ರಾಮಕರಣಿಕೆ ಲಾವಣ್ಯ, ಅಂಗನವಾಡಿ ಸುಪರ್ ವೈಸರ್ ಮುಬೀನಾ ಮೊದಲಾದವರು ಉಪಸ್ಥಿತರಿದ್ದರು. ಪಿಡಿಒ ರಜನಿ ಡಿ. ಸ್ವಾಗತಿಸಿದರು. ಸಿಬ್ಬಂದಿ ತುಳಸಿ ವರದಿ ವಾಚಿಸಿದರು. ಕಾರ್ಯದರ್ಶಿ ನಳಿನಿ ಎ.ಕೆ. ವಂದಿಸಿದರು.
ಎಸ್ಸಿ, ಎಸ್ಟಿಗಳಿಗೆ ಗ್ರಾಮದಲ್ಲೇ ಶಿಬಿರ
ಕೇರಳ ಅಥವಾ ಬೇರೆ ಜಿಲ್ಲೆಯಲ್ಲಿ ತಾಯಿ ಮನೆ ಇರುವುದರಿಂದ ಎಸ್ಸಿ/ಎಸ್ಟಿ ಸಮುದಾಯದ ಮಕ್ಕಳಿಗೆ ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಿಗದೆ ಸರ್ಕಾರಿ ಸವಲತ್ತಿನಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಿಂಗಳೊಳಗೆ ನಮ್ಮ ಗ್ರಾಮದಲ್ಲೇ ಶಿಬಿರ ಆಯೋಜಿಸುವಂತೆ ಅಧ್ಯಕ್ಷ ನವಾಝ್ ಅವರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸಲಹೆ ನೀಡಿದರು.
ಸಿಸಿ ಕ್ಯಾಮರಾ ಅಳವಡಿಕೆ
ತಿಂಗಳಿಗೆ 70 ಸಾವಿರ ತ್ಯಾಜ್ಯ ವಿಲೇವಾರಿಗೆ ವ್ಯಯಿಸಲಾಗುತ್ತಿದ್ದು ಕೇವಲ 20 ಸಾವಿರ ಮಾತ್ರ ಸಂಗ್ರಹ ಆಗುತ್ತಿದೆ. ಒಂದು ವಾರ್ಡ್‌ನಲ್ಲಿ ಸುಮಾರು 300 ಮನೆಗಳಿದ್ದರೂ ಕೇವಲ 40 ಮನೆಗಳಿಂದ ಶುಲ್ಕ ಸಂಗ್ರಹ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಶುಲ್ಕ ತೆರಿಗೆ ವ್ಯಾಪ್ತಿಗೆ ಹಾಕಲಾಗುವುದು. ಗ್ರಾಮದಲ್ಲಿ ಸ್ವಚ್ಛತೆಗಾಗಿ ಗಡಿಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕಸ ಎಸೆಯುವವರಿಗೆ ಹತ್ತು ಸಾವಿರ ದಂಡ ಹಾಕಲಾಗಿದೆ ಎಂದು ಮಾಹಿತಿ ನೀಡಿದರು