ಹುಬ್ಬಳ್ಳಿ: ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ, ದೀಕ್ಷ ಲಿಂಗಾಯತರಿಗೆ ರಾಜ್ಯ ಸರ್ಕಾರದಲ್ಲಿ 2 ಎ ಮೀಸಲಾತಿ ಜಾರಿ ಹಾಗೂ ಎಲ್ಲ ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರ ಮನೆಗೆ ತೆರಳಿ ಶನಿವಾರ ಮನವಿ ಸಲ್ಲಿಸಲಾಯಿತು.
ಅಖಿಲ ಭಾರತ ಪಂಚಮಸಾಲಿ ಮೀಸಲಾತಿ ಚಳವಳಿಗಾಗಿ ಸ್ವಾಗತ ಸಮಿತಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ, ಪಂಚಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ನಗರದ ಶ್ರೀ ಸಿದ್ಧಾರೂಢ ಮಠದಿಂದ ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರ ಮನೆಗೆ ತೆರಳಿದರು. ನಂತರ ಅಕ್ಷಯ ಪಾರ್ಕ್‌ನ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅವರ ಮನೆಗೆ ತೆರಳಿ, ‘ಪಂಚಮಸಾಲಿ ಆಗ್ರಹ ಪತ್ರ’ ನೀಡಿದರು.
ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸರ್ಕಾರಿ ಸವಲತ್ತು ಪಡೆಯಲು ನಮ್ಮ ಮಕ್ಕಳಿಗೆ ಮೀಸಲಾತಿ ಅಗತ್ಯವಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ 2ಡಿ ಮೀಸಲಾತಿ ಘೋಷಿಸಿ ಗೆಟೆಟ್ ನೋಟಿಫಿಕೇಷನ್ ಹೊರಡಿಸಲಾಯಿತು. ಆದರೆ, ಈಗಿನ ಸರ್ಕಾರ ಸ್ಪಂದಿಸುತ್ತಿಲ್ಲ. ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಶಾಸಕರು ಧ್ವನಿ ಎತ್ತಬೇಕು. ಹೀಗಾಗಿ ಶಾಸಕರ ಮನೆಗೆ ತೆರಳಿ ಮನವಿ ಸಲ್ಲಿಸಲಾಗುತ್ತಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮುತ್ತಿಗೆ ಹಾಕಲಾಗುವುದು ಎಂದರಲ್ಲದೆ, ಮೀಸಲಾತಿ ಪ್ರಮಾಣ ನಮ್ಮ ಮಕ್ಕಳ ಕೈಗೆ ಸಿಗುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಹಸಭಾ ಜಿಲ್ಲಾಧ್ಯಕ್ಷ ಲಿಂಗಣ್ಣ ಕರಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರವು ಪಂಚಮಸಾಲಿ ಸಮಾನಕ್ಕೆ 2ಡಿ ಮೀಸಲಾತಿ ನೀಡಿತು. ಆದರೆ, ಜಾರಿಗೆ ಬರಲಿಲ್ಲ. ಮೀಸಲಾತಿ ವಂಚಿತರು ನಾವು. ಮೀಸಲಾತಿ ಸಿಗುವವರೆಗೆ ವಿರಮಿಸುವುದಿಲ್ಲ ಎಂದರು.
ಪ್ರಮುಖರಾದ ಜಿ.ಜಿ. ದ್ಯಾವನಗೌಡ್ರ, ಪ್ರದೀಪ ಪಾಟೀಲ, ಚನ್ನಬಸಪ್ಪ ಬಾಗೇವಾಡಿ, ದ್ಯಾವನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಅಡಿವೆಪ್ಪ ಸಲಕಿ, ಉಮೇಶ ಹುರಕಡ್ಲಿ, ವಿರೂಪಾಕ್ಷಿ ಬೀಳಗಿ, ಸುರೇಶ ಸಂಗಣ್ಣವರ, ಈಶ್ವರ ಶಿರಸಂಗಿ, ಇತರರಿದ್ದರು.