ಮಂಗಳೂರು : ವಿಶ್ವ ಹಿಂದು ಪರಿಷತ್‌ನ ಸೇವಾ ಪ್ರಕಲ್ಪವಾದ ಗೋವನಿತಾಶ್ರಯ ಟ್ರಸ್ಟ್ ಹಾಗೂ ಗೋವರ್ಧನ ಪೂಜಾ ಸಮಿತಿ ವತಿಯಿಂದ ಡಿ.೧೬ ಮತ್ತು ೧೭ರಂದು ನಗರದ ಕದ್ರಿ ಮೈದಾನದಲ್ಲಿ ಗೋವರ್ಧನ ಪೂಜೆ ಹಾಗೂ ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ನಡೆಯಲಿದೆ.
ಗೋವನಿತಾಶ್ರಯ ಟ್ರಸ್ಟ್ ಪಜೀರು ಗ್ರಾಮದ ಬೀಜಗುರಿಯಲ್ಲಿ ನಡೆಸುತ್ತಿರುವ ಗೋಶಾಲೆಗೆ ನೆರವಾಗುವ ಉದ್ದೇಶದಿಂದ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗೋವರ್ಧನ ಪೂಜಾ ಸಮಿತಿ ಅಧ್ಯಕ್ಷ ಜಗದೀಶ ಕೆ.ಶೇಣವ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.೧೬ರಂದು ಬೆಳಗ್ಗೆ ೧೦.೩೫ಕ್ಕೆ ಗೋಪೂಜೆ ನಡೆಯಲಿದೆ. ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಡಾ.ಎಂ.ಬಿ. ಪುರಾಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ . ಸಾಯಂಕಾಲ ೬ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಡಿ.೧೭ರಂದು ಬೆಳಗ್ಗೆ ೮ಕ್ಕೆ ಗೋಪೂಜೆ, ಶ್ರೀಕೃಷ್ಣ ದೇವರ ಪೂಜೆ, ೮.೩೦ರಿಂದ ಭಜನೆ ನಡೆಯಲಿದೆ. ೧೧.೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕ್ಯಾ. ಬೃಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ೨.೩೦ಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ರಾಜಾಂಗಣದಿಂದ ಪಜೀರು ಗೋಶಾಲೆಗೆ ‘ಗೋವಿಗಾಗಿ ಹೊರೆಕಾಣಿಕೆ’ ಮೆರವಣಿಗೆ ಹೊರಡಲಿದೆ. ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು , ಕುತ್ತಾರು, ದೇರಳಕಟ್ಟೆ, , ಅಸೈಗೋಳಿ ಮೂಲಕ ಸಾಗಿ ಪಜೀರು ತಲುಪಲಿದೆ ಎಂದು ಅವರು ತಿಳಿಸಿದರು..
ಗೋವನಿತಾಶ್ರಯ ಟ್ರಸ್ಟ್‌ನ ಟ್ರಸ್ಟಿ ಗೋಪಾಲ ಕುತ್ತಾರ್, ಪೂಜಾ ಸಮಿತಿ ಕಾರ್ಯದರ್ಶಿ ಮನೋಹರ ಸುವರ್ಣ, ಸಹ ಸಂಚಾಲಕ ಪ್ರದೀಪ್ ಪಂಪ್‌ವೆಲ್ ಉಪಸ್ಥಿತರಿದ್ದರು.