- ಚಾಮರಾಜನಗರ: ಮೇವಿನ ಸಮಸ್ಯೆ ಇರುವ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗೋ ಶಿಬಿರ ತೆರೆದು ಮೇವು ಒದಗಿಸಬೇಕು. ಇಲ್ಲವಾದಲ್ಲಿ ಜಾನುವಾರುಗಳನ್ನು ಕಂದಾಯ ಇಲಾಖೆ ಕಚೇರಿ ಎದುರು ಕರೆತಂದು ಪ್ರತಿಭಟನೆ ನಡೆಸುವುದಾಗಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಬೋಸ್ಕೋ ಎಚ್ಚರಿಸಿದರು.
ಹನೂರು ತಾಲೂಕಿನಲ್ಲಿ ಹೆಚ್ಚು ದೇಸಿ ತಳಿಯ ಹಸುಗಳಿವೆ. ಆದರೆ ಈವರೆಗೂ ಮೇವಿನ ಸಮಸ್ಯೆ ತಲೆದೋರಿರಲಿಲ್ಲ. ಆದರೆ ಈ ಬಾರಿ ಮಳೆಯಾಗದ ಕಾರಣ ಬರ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ 16 ಕಡೆಗಳಲ್ಲಿ ಗೋ ಶಿಬಿರ ತೆರೆಯಲಾಗಿದೆ. ಇಲ್ಲಿಗೆ ಚುನಾವಣೆಗೂ ಮುನ್ನ ಸಮರ್ಪಕ ಮೇವು ಒದಗಿಸಲಾಗಿತ್ತಿತ್ತು. ಆದರೀಗ ಮೇವು ಪೂರೈಕೆ ಕಡಿಮೆಯಾಗಿದೆ. ಇತ್ತ ತಾಲೂಕಿನ ಬಿದರಹಳ್ಳಿ, ಸುಳ್ವಾಡಿ, ವಡಕೆಹಳ್ಳ, ಹಳೆಯೂರು, ಕೊಂಬುಡಿಕ್ಕಿ, ಒಡೆಯರಪಾಳ್ಯ, ಹುತ್ತೂರು, ಪಚ್ಚೆದೊಡ್ಡಿ ಹಾಗೂ ಇನ್ನಿತರ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜಾನುವಾರುಗಳಿದ್ದು, ಮೇವಿನ ಸಮಸ್ಯೆ ಕಾಡುತ್ತಿದೆ. ಗೋ ಶಿಬಿರವನ್ನು ತೆರೆಯುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದು, ಭರವಸೆ ನೀಡಿದ್ದರು.
- ಆದರೆ ಕಂದಾಯ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಗೋ ಶಿಬಿರವನ್ನು ತೆರೆಯಲು ನಿರ್ಲಕ್ಷೃ ವಹಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗೋ ಶಿಬಿರ ತೆರೆದು ಜಾನುವಾರುಗಳಿಗೆ ಮೇವು ಪೂರೈಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಇನ್ನು ಪಟ್ಟಣದ ಎಪಿಎಂಸಿಯಲ್ಲಿ ಮೇವು ಘಟಕವನ್ನು ತೆರೆಯಲಾಗಿದ್ದು, ಪ್ರತಿ ಕೆ.ಜಿ ಮೇವಿಗೆ 2 ರೂ. ದರ ನಿಗದಿಪಡಿಸಲಾಗಿದೆ. ತೆರೆದಿರುವ ಗೋ ಶಿಬಿರದಲ್ಲಿ ಉಚಿತವಾಗಿ ಮೇವನ್ನು ನೀಡಲಾಗುತ್ತಿದೆ. ಆದರೆ ಮೇವು ಘಟಕದಲ್ಲಿ ಹಣವನ್ನು ನಿಗದಿಪಡಿಸಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಮೇವು ವಿತರಣೆಯಲ್ಲೂ ಅನ್ಯಾಯ ಎಸಲಾಗುತ್ತಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಹಣ ಪಡೆಯದೇ ಮೇವು ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
- ಸಂಘದ ತಾಲೂಕು ಅಧ್ಯಕ್ಷ ಹರೀಶ್, ಸದಸ್ಯ ರಾಜಣ್ಣ, ಗೋ ಪಾಲಕ ವೃಂದದ ಮುತ್ತಯ್ಯ, ಶಿವಮೂರ್ತಿ, ಮಹೇಶ್ ಇತರರು ಇದ್ದರು.