ಕಾರವಾರ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ದೇಶದಲ್ಲಿ ಪ್ರಬಲವಾದಂತಹ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಹಿಂದು ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಕರೆ ನೀಡಿದರು.
ಹಿಂದು ಹೈಸ್ಕೂಲ್ ಸಭಾಭವನದಲ್ಲಿ ದೀಪಾವಳಿ ಹಾಗೂ ಸನಾತನ ಗೋ ಮಾತಾ ಟ್ರಸ್ಟ್ನ ಎರಡನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. 1947 ರಲ್ಲಿ ಭಾರತದ ಜನಸಂಖ್ಯೆ 33 ಕೋಟಿ ಇತ್ತು. ಗೋವುಗಳ ಸಂಖ್ಯೆ 47 ಕೋಟಿ ಇದ್ದವು. ಈಗ ಜನಸಂಖ್ಯೆ 120 ಕೋಟಿ ದಾಟಿದೆ. ಗೂವುಗಳ ಸಂಖ್ಯೆ 10 ಕೋಟಿ ಗೆ ಇಳಿದಿದೆ. ಗೋವಿನ ಸಗಣಿಯಲ್ಲಿ 108 ಪ್ರಕಾರದ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಗೋವಿನಲ್ಲಿ 33 ಕೋಟಿ ದೇವತೆಗಳಿವೆ ಎಂದು ವಿವರಿಸಿದರು.
ಕಾರವಾರ ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಜಿ.ಪಿ.ಕಾಮತ್, ವಕೀಲ ನಾಗರಾಜ ನಾಯಕ, ಶೀತಲ್ ಅಭಿಷೇಕ್ ಹಾಗೂ ಸನಾತನ ಗೋಮಾತಾ ಟ್ರಸ್ಟ್ ನ ಅಧ್ಯಕ್ಷ ಸಂದೀಪ್ ಗೋಕರ್ಣಕರ್, ರಾಜು ಗೊಕರ್ಣಕರ್, ಪ್ರೇಮಾನಂದ ರೇವಣಕರ್, ದೀಪಕ್ ನಾಯ್ಕ ಹಾಗೂ ಸಂದೀಪ್ ನಾಯ್ಕ ಇತರರು ಇದ್ದರು.
ಗೋ ಪೂಜೆಯ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಗೋವುಗಳ ರಕ್ಷಣೆಯ ಬಗ್ಗೆ ಪ್ರತಿಜ್ಞೆ ಮಾಡಲಾಯಿತು. ಗೋ ಮಾತೆಯ ಸಂರಕ್ಷಣೆಯ ಬಗ್ಗೆ ಪ್ರಬಂಧ ಬರೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.