ಜಿಲ್ಲೆ

ಜಾನುವಾರುಗಳ ಜೀವ ರಕ್ಷಣೆಗೆ ಮುಂದಾಗಿ

ಚಿತ್ರದುರ್ಗ: ರಾಜ್ಯದಲ್ಲಿ ಬರಗಾಲದಿಂದಾಗಿ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಮುಂದಾಗಿ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚಿಸಿದರು.

ನಾಲ್ಕನೇ ಸುತ್ತಿನ ಕಾಲುಬಾಯಿ ಲಸಿಕಾ ಅಭಿಯಾನ, ರೇಬೀಸ್ ಉಚಿತ ಲಸಿಕೆ ಅನುಷ್ಠಾನ ಕುರಿತು ಡಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಕಾಲುಬಾಯಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಬೇಕು. ಯಾವ ಜಾನುವಾರು ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳ 991 ಗ್ರಾಮಗಳಲ್ಲಿ ಸೆ. 26ರಿಂದ ಅ. 25ರವರೆಗೆ ಅಭಿಯಾನ ನಡೆಯಲಿದ್ದು, 3,38,907 ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 3,390 ಬ್ಲಾಕ್ ಗುರುತಿಸಿದ್ದು, ಈಗಾಗಲೇ 3.39 ಲಕ್ಷ ಲಸಿಕಾ ಡೋಸ್ ಸಂಗ್ರಹಿಸಲಾಗಿದೆ. 237 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2,25,603 ದನಗಳು, 1,13,304 ಎಮ್ಮೆಗಳಿವೆ. ಗರ್ಭ ಧರಿಸಿದ ಜಾನುವಾರುಗಳಿಗೆ ಮಾಲೀಕರು ಲಸಿಕೆ ಹಾಕಿಸದಿದ್ದರೆ ಅಂತಹ ವಿವರ ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಕಳೆದ ವರ್ಷದ ಅಭಿಯಾನದಲ್ಲಿ ಶೇ 98ರಷ್ಟು ಗುರಿ ಸಾಧಿಸಲಾಗಿತ್ತು ಎಂದರು.
ಸೆ. 28ರಿಂದ ಅ. 27ರವರೆಗೆ ಉಚಿತ ರೇಬೀಸ್ ಲಸಿಕೆ ಹಾಕಲಾಗುವುದು. ಸಾಕು ನಾಯಿ ಹೊಂದಿರುವ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಇದ್ದರು.