ಮದ್ದೂರು: ಮಹಾತ್ಮ ಗಾಂಧೀಜಿ ಸೇರಿದಂತೆ ನೂರಾರು ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಸ್ವಾತಂತ್ರ್ಯ ಕೊಟ್ಟಿದ್ದಾರೆ. ಇಂತಹ ಮಹಾನ್ ನಾಯಕರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕು ಆಡಳಿತ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಯುವಜನತೆ ಸೇರಿದಂತೆ ಸರ್ವರು ಸೇವಾ ಮನೋಭಾವದಿಂದ ಶ್ರಮಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. 1857ರಲ್ಲಿ ಆರಂಭಗೊಂಡು 1947ರಲ್ಲಿ ಮುಕ್ತಾಯಗೊಂಡ ಚಳುವಳಿಯ ಉದ್ದಕ್ಕೂ ಸ್ವಾರ್ಥ ಬದಿಗಿಟ್ಟು ದೇಶಪ್ರೇಮವನ್ನೇ ಉಸಿರಾಗಿಟ್ಟುಕೊಂಡು ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಇಂದಿನ ಯುವಜನತೆ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಲವು ಮಹನೀಯರ ತ್ಯಾಗ, ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಇಂತಹ ಮಹಾನ್ ನಾಯಕರನ್ನು ದಿನನಿತ್ಯ ನೆನೆಯುವ ಜತೆಗೆ ಅವರ ಆದರ್ಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದರು.
ಅಭಿನಂದನೆ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ನೀಡಿದ ಲಿಂಗೇಗೌಡ (ಪಕ್ಷಿಪ್ರೇಮಿ), ಪುಟ್ಟಸ್ವಾಮಿ (ಕ್ರೀಡೆ), ಜಿ.ಸಿ.ವಿದ್ಯಾಪ್ರಸಾದ್ (ವನ್ಯಜೀವಿ ಸಂರಕ್ಷಕ), ಎಚ್.ವಿ.ಲೀಲಾವತಿ, ಶಿವಲಿಂಗಾಚಾರಿ(ಶಿಕ್ಷಣ ಕ್ಷೇತ್ರ), ಸತೀಶ್(ಸಮಾಜ ಸೇವೆ), ಸೌಮ್ಯಾ (ಸಂಘಟನೆ), ರಾಹುಲ್‌ಗೌಡ (ಐಎಫ್‌ಎಸ್ 20ನೇ ರ‌್ಯಾಂಕ್), ಯೋಗೇಶ್ ಆರಾಧ್ಯ(ಸಮಾಜಸೇವೆ), ಎಸ್.ಮಹದೇವಯ್ಯ(ಪೊಲೀಸ್ ಇಲಾಖೆ), ನಾಗಮ್ಮ (ವರ್ತಕರು), ಮಂಜೇಗೌಡ(ತೋಟಗಾರಿಕೆ) ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕ್ರೀಡಾಂಗಣದಲ್ಲಿ ಹಾಜರಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡ ಮತ್ತು ಸ್ಥಳೀಯ ಪೊಲೀಸರು ಧ್ವಜವಂದನೆ ವೇಳೆ ಪಥ ಸಂಚಲನ ನೋಡುಗರ ಗಮನ ಸೆಳೆಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿ ಗೀತೆಗಳನ್ನಾಧರಿಸಿದ ರೂಪಕ ನೃತ್ಯ ಮತ್ತು ಸಮೂಹ ಗಾಯನ ನೃತ್ಯಗಳು ಗಮನ ಸೆಳೆದವು.
ಪುರಸಭೆ ಸದಸ್ಯರಾದ ಕೋಕಿಲಾ, ಸಿದ್ದರಾಜು, ಬಿ.ಸಿ.ಸರ್ವಮಂಗಳಾ, ಅಬ್ರಾಜ್‌ಖಾನ್, ಸನ್ಮಾನ ಸಮಿತಿ ಅಧ್ಯಕ್ಷ ಮ.ನ.ಪ್ರಸನ್ನಕುಮಾರ್, ಸದಸ್ಯರಾದ ಆತಗೂರು ನಿಂಗಯ್ಯ, ಆನಂದಾಚಾರಿ, ತಾಪಂ ಇಒ ರಾಮಲಿಂಗಯ್ಯ, ಬಿಇಒ ಸಿ.ಎಚ್.ಕಾಳೀರಯ್ಯ, ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ವೃತ್ತ ನಿರೀಕ್ಷಕ ವೆಂಕಟೇಗೌಡ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿ, ಮುಖಂಡರಾದ ತಿಪ್ಪೂರು ರಾಜೇಶ್, ಮಹದೇವು, ವೆಂಕಟಾಚಲಯ್ಯ ಮತ್ತಿತರರಿದ್ದರು.