ಯಲಬುರ್ಗಾ: ಯೋಗ ಭಾರತೀಯ ಸಂಸ್ಕೃತಿಯ ಮೂಲ ಬೇರು. ಇಡೀ ವಿಶ್ವಕ್ಕೆ ಯೋಗದ ಬಗ್ಗೆ ಪರಿಚಯಿಸಿದ ದೇಶ ನಮ್ಮದು ಎಂದು ಜ್ಞಾನಗಂಗಾ ಯೋಗಾಶ್ರಮದ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಧ್ಯಾನ ಯೋಗ ಮಂದಿರ ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯ ಯೋಗಕ್ಕಾಗಿ ಒಂದು ತಾಸು ಸಮಯ ಮೀಸಲಿಡಬೇಕು. ಗುಣವಾಗದ ಕಾಯಿಲೆಗಳಿಗೆ ಯೋಗ ರಾಮಬಾಣವಾಗಿದೆ. ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಯೋಗ ಸಹಕಾರಿಯಾಗಿದೆ. ಕ್ರಿಯಾಶೀಲತೆ, ನೆಮ್ಮದಿ ಬದುಕಿಗೆ ಯೋಗ ಅವಶ್ಯ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಯೋಗವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶಾರೀರಿಕ ರೋಗಗಳ ತಡೆಗಟ್ಟಲು ಯೋಗ ಸಹಕಾರಿ. ಯೋಗ ಒಂದು ದಿವ್ಯ ಔಷಧಿ. ಪ್ರಾಣಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಧ್ಯಾನ ಯೋಗ ಕೇಂದ್ರ ಸ್ಥಾಪಿಸಿ, ಜನರಿಗೆ ಅನುಕೂಲ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಇಟಗಿ-ಚಿಕ್ಕಮ್ಯಾಗೇರಿಯ ಗುರುಶಾಂತವೀರ ಸ್ವಾಮೀಜಿ, ನಿರಂಜನ ಸ್ವಾಮೀಜಿ, ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಸಂಗಣ್ಣ ತೆಂಗಿನಕಾಯಿ, ಮುಖಂಡ ವೀರೇಶ ತೆಂಗಿನಕಾಯಿ ಇತರರಿದ್ದರು.