ಹುಬ್ಬಳ್ಳಿ: ತಾಲೂಕಿನ ಗಾಮನಗಟ್ಟಿಯಲ್ಲಿ ಗ್ರಾಮದೇವತೆಯರ ನೂತನ ದೇವಸ್ಥಾನ ಕಟ್ಟಡ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ಐದು ದಿನಗಳ ಜಾತ್ರಾ ಮಹೋತ್ಸವ ಮಾ. 3ರಿಂದ ಏರ್ಪಡಿಸಲಾಗಿದೆ.
ಸುಳ್ಳದ ಪಂಚಗ್ರಹ ಹಿರೇಮಠದ ಶ್ರೀ ಶಿವ ಸಿದ್ದರಾಮ ಶಿವಯೋಗಿ ಶಿವಾಚಾರ್ಯರ ನೇತೃತ್ವ ಹಾಗೂ ಶ್ರೀ ಕುಮಾರ ವಿರುಪಾಕ್ಷ ಸ್ವಾಮೀಜಿ, ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 3ರಂದು ಬೆಳಗ್ಗೆ 9.30ಕ್ಕೆ ಶ್ರೀ ದ್ಯಾಮಮ್ಮ ಶ್ರೀ ದುರ್ಗಮ್ಮರ ಪುರಪ್ರವೇಶ, ದೃಷ್ಟಿ ಬರೆಯುವುದು ಮತ್ತು ಆರತಿ, ಭಜನೆ, ಡೊಳ್ಳು ಮೇಳ, ಕುಂಭ ಮೇಳದೊಂದಿಗೆ ಮೆರವಣಿಗೆ ನಡೆಸಿ ಚೌಕಿ ಮನೆಗೆ ಬಂದು ಕೂಡಿಸಲಾಗುತ್ತದೆ.
ಮಾ. 4ರಿಂದ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಾ. 7ರಂದು ಬೆಳಗ್ಗೆ ಚಂಡಿಕಾ ಹೋಮ, ದೇವಿಯರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.