ಬೆಂಗಳೂರು: ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಲು ನೀರಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಸುಂದರಂ ಕ್ಲೆಮೇಟ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಮೃದುಲಾ ರಮೇಶ್ ಹೇಳಿದ್ದಾರೆ.
ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ (ಸಿಪಿಪಿ) ನಗರದ ಐಐಎಂಬಿ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ಎರಡು ದಿನಗಳ ನೀರು ಮತ್ತು ಸುಸ್ಥಿರತೆ ಸಮ್ಮೇಳನದಲ್ಲಿ ಸೋಮವಾರ ಮಾತನಾಡಿ, ಹವಾಮಾನ ಹೆಚ್ಚಳದಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಈ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ನೀರಿನ ಪ್ರಮುಖ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪಾನಿ ಫೌಂಡೇಶನ್ ಸಿಇಒ ಸತ್ಯಜಿತ್ ಭಟ್ಕಳ್ ಮಾತನಾಡಿ, ಬರದ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಬೇಡಿಕೆ ಮತ್ತು ಪೂರೈಕೆ ಆಧರಿತ ಪರಿಹಾರಗಳತ್ತ ಗಮನ ನೀಡಬೇಕಾದ ಅನಿವಾರ್ಯತೆ ಬಂದೊದಗಿದೆ. ಅಲ್ಲದೆ ರೈತ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದರಿಂದ ಕೃಷಿ ಇಳುವರಿ ಹೆಚ್ಚುತ್ತದೆ. ಇದರಿಂದ ಗ್ರಾಮೀಣ ಸಮುದಾಯಗಳಿಗೆ ಸುಸ್ಥಿರ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಐಐಎಂ ಬೆಂಗಳೂರಿನ ವಿಶ್ರಾಂತ ಕುಲಪತಿ ಪೊ. ತ್ರಿಲೋಚನ್ ಶಾಸಿ ಮಾತನಾಡಿ, ಸಾರ್ವಜನಿಕ ನೀತಿ ಕೇಂದ್ರವು ಸಮಸ್ಯೆಗಳಿಗೆ ಸಮಾನ, ಅಂತರ್ಗತ ಮತ್ತು ಸುಸ್ಥಿರ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನೀತಿ ರಚನೆ ಮೇಲೆ ಪ್ರಭಾವ ಬೀರುವುದು ಮತ್ತು ಆಡಳಿತ ಸುಧಾರಣೆ ಇದರ ಉದ್ದೇಶ ಎಂದರು.