ಜಿಲ್ಲೆ

ಗ್ಲೋಬಲ್​ ಗಾರ್ನರ್​ ಎಕ್ಸ್​ಪೋಗೆ ತೆರೆ: ಹೊಸ ಬಿಸಿನೆಸ್​, ಫ್ರಾಂಚೈಸಿ, ವಿನೂತನ ಆಲೋಚನೆಗೆ ವೇದಿಕೆ

ಬೆಂಗಳೂರು: ಗ್ಲೋಬಲ್​ ಗಾರ್ನರ್​ ಸಂಸ್ಥೆ ಮತ್ತು ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಸಹಯೋಗದಲ್ಲಿ ಅರಮನೆ ಮೈದಾನದಲ್ಲಿರುವ ಪ್ರಿನ್ಸಸ್​ ಗಾಲ್ಪ್​ ಗೇಟ್​ 9ರಲ್ಲಿ ಆಯೋಜಿಸಿದ್ದ ಎರಡು ದಿನಗಳ "ಗ್ಲೋಬಲ್​ ಗಾರ್ನರ್​ ಎಕ್ಸ್​ಪೋ'ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿಯಾಗಿ ಜರುಗಿತು. ಎರಡು ದಿನದ ಎಕ್ಸ್​ಪೋಗೆ ಭಾನುವಾರ ತೆರೆ ಬಿದ್ದಿತು.

ಹೊಸದಾಗಿ ಬಿಸಿನೆಸ್​ ಆರಂಭಿಸುವವರು, ಹೊಸ ಫ್ರಾಂಚೈಸಿಗಳನ್ನು ಆರಂಭಿಸಲು ಸಹಾಯ ನಿರೀಕ್ಷೆ ಮಾಡುತ್ತಿರುವವರು, ವಿನೂತನ ಕಲ್ಪನೆಯೊಂದಿಗೆ ವಹಿವಾಟು ಆರಂಭಿಸಲು ಎದುರು ನೋಡುತ್ತಿದ್ದವರಿಗೆ ಎಕ್ಸ್​ಪೋ ವೇದಿಕೆ ಕಲ್ಪಿಸಿತ್ತು.

ಕೇವಲ ಬರಿಗೈಯಲ್ಲಿ ಕುಳಿತಿರುವವರು ಹೊಸ ಐಡಿಯಾ ಪಡೆಯಲು ಬಂದಿರಲಿಲ್ಲ. ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಕಾರ್ಯನಿರ್ವಹಿಸುತ್ತಿರುವವರು ಕೂಡ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ತಮ್ಮದೇ ಸಂಸ್ಥೆಗಳನ್ನು ಹುಟ್ಟಿಹಾಕುವ ಹೊಸ ಆಲೋಚನೆಗಳೊಂದಿಗೆ ಮೇಳಕ್ಕೆ ಭೇಟಿ ನೀಡಿದ್ದರು.

ಇದರ ಜತೆಗೆ ಮೇಳದಲ್ಲಿ ಕೈಗೆಟುಕುವ ರಿಯಾಯಿತಿ ದರದಲ್ಲಿ ಫರ್ನಿಚರ್​​, ಹತ್ತಾರು ಬಗೆಯ ಪಾದರೆಕ್ಷೆಗಳು, ಕುರುಕಲು ತಿಂಡಿಗಳು, ರಿಯಾಯಿತಿ ದರದಲ್ಲಿ ಎಲೆಕ್ಟ್ರಾನಿಕ್ಸ್​ ಉತ್ಪನ್ನಗಳು, ರುಚಿಕರ ತಿಂಡಿ ತಿನಿಸುಗಳನ್ನು ಒಳಗೊಂಡ ಆಹಾರ ಮೇಳ ಇತ್ತು. ಸಾವಿರಾರು ಗ್ರಾಹಕರು ಕುಟುಂಬ ಸಮೇತ ಬಂದು ಖರೀದಿ ಜತೆಗೆ ಹೊಸ ಐಡಿಯಾದೊಂದಿಗೆ ಖುಷಿಯಿಂದ ಮನೆಗೆ ಹಿಂತಿರುಗಿದರು.

ಆಟೋಟ-ಊಟ: ಆಹಾರ ಮೇಳದಲ್ಲಿ ಸ್ನ್ಯಾಕ್ಸ್​, ಉತ್ತರ ಮತ್ತು ದಕ್ಷಿಣ ಭಾರತೀಯ ಶೈಲಿಯ ಆಹಾರ ಪದಾರ್ಥಗಳು ಲಭ್ಯವಾಗಿದ್ದವು. ತಮಗೆ ಇಷ್ಟವಾದ ಭೋಜನವನ್ನು ಸವಿಯುವ ಮೂಲಕ ಅನಂದಪಟ್ಟರು. ಅಲ್ಲಿಯೇ ಪಕ್ಕದಲ್ಲಿದ್ದ ಆಟಿಕೆಗಳು ಮಕ್ಕಳನ್ನು ಕೈಬೀಸಿ ಕರೆಯುತ್ತಿದ್ದವು. ಗಂಟೆಗಳ ಕಾಲ ಮಕ್ಕಳು ಆಟೋಟಗಳಲ್ಲಿ ಪಾಲ್ಗೊಂಡಿದ್ದರು.

2025ಕ್ಕೆ ವಿಶ್ವಕ್ಕೆ ದೊಡ್ಡ ಕಂಪನಿ ಮಾಡುವ ಉದ್ದೇಶ: ಗ್ಲೋಬಲ್​ ಗಾರ್ನರ್​ ಸಂಸ್ಥೆಯನ್ನು 2025ರ ವೇಳೆಗೆ ಅಮೆಜಾನ್​, ಪ್ಲಿಪ್​ಕಾರ್ಟ್​ ಮಾದರಿಯಲ್ಲಿ ವಿಶ್ವಮಟ್ಟದ ಸಂಸ್ಥೆಯಾಗಿ ಕಟ್ಟುವ ಗುರಿ ಹೊಂದಲಾಗಿದೆ ಎಂದು ಗ್ಲೋಬಲ್​ ಗಾರ್ನರ್​ ಸಂಸ್ಥೆ ವ್ಯವಸ್ಥಾಪಕ ಅಧ್ಯಕ್ಷ ವಿಕಾಸ್​ ರಾವತ್​ ತಿಳಿಸಿದರು. ಮೇಳದಲ್ಲಿ ಮಾತನಾಡಿದ ಅವರು, ನಾನು ಒಬ್ಬನೇ ಬದುಕಬೇಕು ಎಂದಿದ್ದರೆ ಯಾವುದಾದರೂ ವಹಿವಾಟು ನಡೆಸುತ್ತಿದ್ದೆ. ಆದರೆ, ಯುವ ಪೀಳಿಗೆಗೆ ಕೊಡುಗೆ ನೀಡಬೇಕು ಮತ್ತು ಯುವಕರನ್ನು ಉದ್ಯಮಿಗಳಾಗಿ ರೂಪಿಸಬೇಕು ಎಂಬ ಮಹದಾಸೆಯಿಂದ ಸಂಸ್ಥೆಯನ್ನು ಆರಂಭಿಸಿದ್ದೇನೆ ಎಂದು ಹೇಳಿದರು.

ಸತತವಾಗಿ ಜನರನ್ನು ತಲುಪಲು ದೇಶದ ಇತರೆ ಮಹಾನಗರಗಳಲ್ಲಿ ಮತ್ತು ರಾಜ್ಯದ ವಿವಿಧ ಪಟ್ಟಣಗಳಲ್ಲಿ ನಿರಂತರವಾಗಿ ಮೇಳಗಳನ್ನು ಆಯೋಜಿಸಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಮೇಳ ಆಯೋಜಿಸುವ ಗುರಿ ಹೊಂದಲಾಗಿದೆ.

ಹೊಸ ಅವಕಾಶಗಳು ದೊರೆಯಬಹದು ಎಂಬ ನಿರೀಕ್ಷೆಯೊಂದಿಗೆ ಮೇಳಕ್ಕೆ ಆಗಮಿಸಿದ್ದೆ. ಒಂದಿಷ್ಟು ಐಡಿಯಾಗಳು ಸಿಕ್ಕವು. ಲೆಕ್ಕಪರಿಶೋಧಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಲಭ್ಯವಾಗಿದ್ದರೆ ಚೆನ್ನಾಗಿರುತ್ತಿತ್ತು.

| ಗೋದಾವರಿ ಲೆಕ್ಕ ಪರಿಶೋಧಕಿ

ಕ್ಯಾಟರಿಂಗ್​ ಕ್ಷೇತ್ರದ ವಸ್ತುಗಳನ್ನು ನೋಡಲು ಮತ್ತು ಕ್ಯಾಟರಿಂಗ್​ ಬಿಸಿನೆಸ್​ ಅನ್ನು ಉತ್ತಮಪಡಿಸಲು ಬೇಕಾದ ಕೌಶಲವನ್ನು ತಿಳಿಯಲು ಎದುರು ನೋಡುತ್ತಿದೆ. ಇಲ್ಲಿ ಬಂದ ನಂತರ ಸಾಕಷ್ಟು ಮಾಹಿತಿ ಲಭ್ಯವಾಯಿತು. ಇದಕ್ಕಾಗಿ ಮೇಳ ಸಂಘಟಕರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ.

| ಸುನೀಲ್​ ಚೌರಾಸಿಯಾ

ಮೇಳವು ಸಾಕಷ್ಟು ಮಾಹಿತಿಯುತವಾಗಿ, ಫರ್ನಿಚರ್​, ಆಹಾರ ಮೇಳ, ಬಿಸಿನೆಸ್​... ಹೀಗೆ ಒಂದೇ ಸೂರಿನಡಿ ಹಲವು ಬಗೆಯಲ್ಲಿ ಉಪಯೋಗವಾಗುತ್ತಿದೆ. ವೀಕೆಂಡ್​ನಲ್ಲಿ ಮಾಲ್​ಗಳಿಗೆ ಭೇಟಿ ನೀಡುವ ಬದಲಾಗಿ ಇಲ್ಲಿಗೆ ಭೇಟಿ ನೀಡಿದ್ದು ಖುಷಿ ನೀಡಿತು.

| ಸಂಧ್ಯಾ ಗ್ರಾಹಕಿ

ಎಲೆಕ್ಟ್ರಾನಿಕ್ಸ್​ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಐಡಿಯಾಗಳು ಸಿಗಬಹುದು ಎಂದು ಇಲ್ಲಿಗೆ ಭೇಟಿ ನೀಡಿದ್ದೇನೆ. ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ಸುದ್ದಿ ನೋಡಿ ಮೇಳ ನಡೆಯುತ್ತಿರುವುದು ಗೊತ್ತಾಯಿತು. ಪರಿಸರ ಸ್ನೇಹಿ ಬಿಸಿನೆಸ್​ಗೆ ಮಾಡಲು ಚಿಂತನೆ ನಡೆಸುತ್ತಿದ್ದೇನೆ. ಈ ಭೇಟಿಯಿಂದ ಸ್ವಲ್ಪ ಮಟ್ಟಿಗೆ ಸಹಕಾರಿಯಾಯಿತು.

| ಸಂತೋಷ್​ ಗ್ರಾಹಕ

ಬಿಸಿನೆಸ್​, ಶಿಕ್ಷಣ, ಪ್ರವಾಸೋದ್ಯಮಕ್ಕೆ ಸಂಬಂಧಿ ಮಾಹಿತಿಗಳು ಲಭ್ಯವಾದವು. ಎಲೆಕ್ಟ್ರಾನಿಕ್ಸ್​ ಮಳಿಗೆ ನಡೆಸುತ್ತಿದ್ದು, ಪ್ರಾಂಚೈಸಿ ಸ್ಥಾಪಿಸಲು ಚಿಂತನೆ ನಡೆಸುತ್ತಿದ್ದೇವೆ. ಅದಕ್ಕಾಗಿ ಭೇಟಿ ನೀಡಿದ್ದೇವೆ. ಸಾಕಷ್ಟು ಮಾಹಿತಿ ದೊರೆಯಿತು.

| ಸಂದೀಪ್​ ವ್ಯಾಪಾರಿ