ಜಿಲ್ಲೆ

ಕೆಐಎ ಲಾಂಜ್, ಆಹಾರ/ಪಾನೀಯ ಮಳಿಗೆಗೆ ಜಾಗತಿಕ ಪ್ರಶಸ್ತಿ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತನ್ನ ದೇಶೀಯ ಹಾಗೂ ಅಂತಾರಾಷ್ಟ್ರೀಯ ಲಾಂಜ್‌ಗಳಲ್ಲಿ ಚಾಲ್ತಿಗೆ ತಂದಿರುವ ಆಹಾರ, ಪಾನೀಯ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ 10 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಇತ್ತೀಚೆಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ವಿಮಾನ ನಿಲ್ದಾಣ ಆಹಾರ, ಪಾನೀಯ ಹಾಗೂ ಆತಿಥ್ಯ ಕ್ಷೇತ್ರದ ಸಮ್ಮೇಳನ - 2025 ಮತ್ತು ಪ್ರಶಸ್ತಿ ಸಮಾರಂಭದಲ್ಲಿ ಕೆಐಎ ಅಧಿಕಾರಿಗಳು ಈ ಪ್ರಶಸ್ತಿ ಸ್ವೀಕರಿಸಿದರು. ಒಂದೇ ಬಾರಿಗೆ ಇಷ್ಟು ಪ್ರಮಾಣದ ಪ್ರಶಸ್ತಿ ಪಡೆದ ವಿಮಾನ ನಿಲ್ದಾಣಗಳ ಪೈಕಿ ಕೆಐಎ ಒಂದೆನಿಸಿದೆ.

ಬೆಂಗಳೂರು ವಿಮಾನ ನಿಲ್ದಾಣದ ಲಾಂಜ್ ಮತ್ತು ರೆಸ್ಟೋರೆಂಟ್‌ಗಳು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿಯೂ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿವೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ವಾಣಿಜ್ಯ ಅಧಿಕಾರಿ ಕೆನ್ನೆತ್ ಗುಲ್ಡ್‌ಬ್ಜೆಗ್ ಪ್ರತಿಕ್ರಿಯಿಸಿದ್ದಾರೆ.

080 ಲಾಂಜ್‌ಗೆ ಏಳು ಪ್ರಶಸ್ತಿಗಳ ಗರಿ:

ಟರ್ಮಿನಲ್ 2ರಲ್ಲಿರುವ 080 ಲಾಂಜ್ ಒಟ್ಟು ಏಳು ಪ್ರಶಸ್ತಿಗೆ ಪಾತ್ರವಾಗಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಲೌಂಜ್ ಪ್ರಶಸ್ತಿ ಜತೆಗೆ ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ‘ಏರ್‌ಪೋರ್ಟ್ ಎಫ್​ ಆ್ಯಂಡ್ ಬಿ ಆರ್ ಆಫ್​​ ದಿ ಇಯರ್ - ಸೆನ್ಸ್ ಆಫ್​ ಪ್ಲೇಸ್’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಟಿ-2 ನಲ್ಲಿರುವ 080 ಪ್ರಾದೇಶಿಕ ಲಾಂಜ್‌ನೊಳಗಿನ ಸಿಗ್ನೇಚರ್ ರೆಸ್ಟೋರೆಂಟ್ ಕಿಲಾ, ಗಮನಾರ್ಹ ವಾಸ್ತುಶಿಲ್ಪ ಮತ್ತು ವಾತಾವರಣಕ್ಕಾಗಿ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ ಪ್ರಶಸ್ತಿ ಪಡೆದುಕೊಂಡಿದೆ.

ಟರ್ಮಿನಲ್ 1ರಲ್ಲಿರುವ 080 ದೇಶೀಯ ಲಾಂಜ್ ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ವರ್ಷದ ವಿಮಾನ ನಿಲ್ದಾಣ ಲಾಂಜ್ ಓಪನಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.