ಜಿಲ್ಲೆ

ಗ್ಲಾಸ್ ಬ್ರಿಡ್ಜ್ ಗಳಿಂದ ಕೊಡಗು ನರಕವಾಗಲಿದೆ: ಎನ್.ಯು.ನಾಚಪ್ಪ

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡಗಿನಲ್ಲಿ ೧೬ಕ್ಕೂ ಹೆಚ್ಚು ಗ್ಲಾಸ್ ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಗಾಜಿನ ಸೇತುವೆಗಳು ನಿರ್ಮಾಣಗೊಂಡರೆ ಕೊಡವ ಲ್ಯಾಂಡ್ ನರಕವಾಗಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.


ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಚೇರಂಬಾಣೆಯಲ್ಲಿ ಮಂಗಳವಾರ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.


ಅತ್ಯಂತ ಸೂಕ್ಷ್ಮ ಪರಿಸರ ವಲಯವನ್ನು ಹೊಂದಿರುವ ಕೊಡಗಿನಲ್ಲಿ ಗ್ಲಾಸ್ ಬ್ರಿಡ್ಜ್‌ಗಳ ನಿರ್ಮಾಣದಿಂದ ಜನದಟ್ಟಣೆ ಅಧಿಕವಾಗುತ್ತದೆ. ಇದನ್ನು ತಡೆದುಕೊಳ್ಳುವ ಶಕ್ತಿ ಕೊಡವ ಲ್ಯಾಂಡ್‌ಗೆ ಇಲ್ಲದಾಗಿದೆ. ಈ ಯೋಜನೆ ಪರಿಸರದ ಮೇಲೆ ತೀವ್ರ ದುಷ್ಪರಿಣಾಮವನ್ನುಂಟು ಮಾಡಲಿದೆ ಎಂದರು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ರೆಸಾರ್ಟ್, ವಿಲ್ಲಾ, ಟೌನ್ ಶಿಪ್‌ಗಳ ನಿರ್ಮಾಣಕ್ಕಾಗಿ ಬೆಟ್ಟಗುಡ್ಡಗಳ ನಾಶ, ಮರಗಳ ಹನನವಾಗುತ್ತಿದೆ. ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಬಲ್ಲ ಈ ಅಂಶಗಳನ್ನು ಮುಚ್ಚಿ ಹಾಕುತ್ತಿರುವ ಸರ್ಕಾರ ಬಂಡವಾಳಶಾಹಿಗಳ ಪರವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪ ಮಾಡಿದರು.


ಕೊಡವರ ಪೂರ್ವಾರ್ಜಿತ ಭೂಮಿಯಾಗಿದ್ದ ಕಡಮಕ್ಕಲ್ಲಿನಿಂದ ಪೆರುಂಬಾಡಿ ವರಗಿನ ಕೆಲವು ಪ್ರದೇಶವನ್ನು ಕೇರಳದ ವ್ಯಕ್ತಿಗಳಿಗೆ ೧೯೩೦ರಲ್ಲಿ ಭೋಗ್ಯಕ್ಕೆ ನೀಡಲಾಗಿದೆ. ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣದ ಕಾಡುಗಳನ್ನು ನಾಶ ಮಾಡುವ ದಂಧೆ ಇಂದಿಗೂ ಎಗ್ಗಿಲ್ಲದೆ ಮುಂದುವರೆದಿದೆ. ಸರ್ಕಾರದೊಂದಿಗೆ ನಂಟು ಹೊಂದಿರುವ ಕೊಟ್ಟಾಯಂನ ಬೃಹತ್ ಟಿಂಬರ್ ಉದ್ಯಮಪತಿಗಳು ಇಡೀ ಕೊಡಗನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಯಾವ ಕಾನೂನು ಕೂಡ ಅನ್ವಯವಾಗುತ್ತಿಲ್ಲ. ಆದರೆ ಕೊಡವರು ಗೃಹ ಉಪಯೋಗಕ್ಕೆ ತಾವು ನೆಟ್ಟು ಬೆಳೆಸಿದ ಸಿಲ್ವರ್ ಮರವನ್ನು ಕಡಿದರೆ ಅದನ್ನೇ ಬೊಟ್ಟು ಮಾಡಿ ಸರ್ಕಾರ ಕಿರುಕುಳ ನೀಡುತ್ತಿದೆ ಮತ್ತು ನಮ್ಮನ್ನು ಖಳನಾಯಕರಂತೆ ನೋಡುತ್ತಿದೆ. ದೊಡ್ಡ ದೊಡ್ಡ ರೆಸಾರ್ಟ್‌ಗಳ ನಿರ್ಮಾಣಕ್ಕೆ ಪರ್ವತವನ್ನು ಬಗೆದು ವಯನಾಡಿನ ರೀತಿಯಲ್ಲಿ ಭೂಕುಸಿತಕ್ಕೆ ಆಹ್ವಾನ ನೀಡುವ ಪ್ರಕೃತಿಯ ಮೇಲಿನ ದಾಳಿಯನ್ನು ತಡೆಯುವ ಬದಲು ಸರ್ಕಾರ ಬಂಡವಾಳಶಾಹಿಗಳಿಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿದರು.


ಇತ್ತೀಚೆಗೆ ಅರಣ್ಯ ಮಂತ್ರಿಗಳು ಹೊರಡಿಸಿರುವ ಸುತ್ತೋಲೆಯಲ್ಲಿ ಕೊಡಗಿನ ಪ್ರಕೃತಿಗೆ ಮಾರಕವಾಗಿರುವ ರೆಸಾರ್ಟ್ ಹಾಗೂ ಭೂಮಿಯನ್ನು ಭೋಗ್ಯಕ್ಕೆ ಪಡೆದ ಕಂಪೆನಿಗಳು ನಿರಂತರ ನಡೆಸುತ್ತಿರುವ ಮರಹನನದ ಬಗ್ಗೆ ಪ್ರಸ್ತಾಪಿಸಿಲ್ಲ. ಕೊಡಗಿನ ಪ್ರಾಕೃತಿಕ ವಿಕೋಪ, ಭೂಸ್ಫೋಟ ಮತ್ತು ಜಲಪ್ರಳಯದ ಅಂಶಗಳನ್ನು ಉಲ್ಲೇಖಿಸಿಲ್ಲ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.


ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ಕೊಡವ ಲ್ಯಾಂಡ್ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.


ಚೇರಂಬಾಣೆಯಲ್ಲಿ ನಡೆದ ಜನಜಾಗೃತಿ ಮನವ ಸರಪಳಿಯಲ್ಲಿ ಕಲ್ಮಾಡಂಡ ದಮಯಂತಿ, ಕಲ್ಮಾಡಂಡ ರೀಟ, ಮಂದಪಂಡ ರಮ್ಯಾ, ಕಲ್ಮಾಡಂಡ ಕವಿತಾ, ಕೇಕಡ ಗಂಗೆ ಅಪ್ಪಣ್ಣ, ಪಟ್ಟಮಾಡ ಸೀತಮ್ಮ, ತೇಲಪಂಡ ಶೈಲ, ಅಳಮಂಡ ಜೈ, ಅಜ್ಜಿನಂಡ ಪಾಪಣ್ಣ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಚೀಯಬೇರ ಸೋಮಣ್ಣ, ಬೊಳ್ಳಾರ್ಪಂಡ ಪೂವಯ್ಯ, ಕಾಡಂಡ ಅಪ್ಪಸಾಮಿ, ಬೊಳ್ಳಾರ್ಪಂಡ ಸಾಬು ಸೇರಿದಂತೆ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.