ಗೋಣಿಕೊಪ್ಪಲು : ಜಿಲ್ಲೆಯಲ್ಲಿ 55 ವರ್ಷ ಮೇಲ್ಪಟ್ಟ ಮಹಿಳೆಯರೂ ವಿವಿಧ ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಿ ಕೊಡಗಿಗೆ ಕೀರ್ತಿ ತರುತ್ತಿರುವುದು ಶ್ಲಾಘನೀಯ ಎಂದು ಬಿಬಿಸಿ ಕ್ಲಬ್‌ನ ಅಧ್ಯಕ್ಷರಾದ ಕರ್ನಲ್ ಒಲಂಪಿಯನ್ ಬಾಳೆಯಡ ಸುಬ್ರಮಣಿ ಹೇಳಿದರು.
ಗೋಣಿಕೊಪ್ಪಲುವಿನ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊಡಗಿನ ಗೋಣಿಕೊಪ್ಪಲುವಿನ ಪ್ರತಿಷ್ಠಿತ ಬಾಸ್ಕೆಟ್ ಬಾಲ್ ಕ್ಲಬ್‌ನ ಹಲವು ಮಹಿಳೆಯರು ವಿವಿಧೆಡೆ ತಮ್ಮ ಕ್ರೀಡಾಕೌಶಲವನ್ನು ಮೆರೆಯುತ್ತಿದ್ದಾರೆ. ಇತ್ತೀಚೆಗೆ ತ್ರಿವೇಂದ್ರಂನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 3 ದಿನಗಳ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಪಂದ್ಯಾವಳಿಯ 3 ವಿಭಾಗಗಳಲ್ಲಿ ಭಾಗವಹಿಸುವ ಮೂಲಕ ಮಾಸ್ಟರ್ಸ್ ತಂಡ ಸ್ವರ್ಣ ಪದಕ ಗಳಿಸಿ ಪಾರಮ್ಯ ಮೆರೆದಿದೆ. ಇವರನ್ನು ಅಭಿನಂದಿಸಲು ಹರ್ಷವೆನಿಸುತ್ತದೆ ಎಂದರು.
55 ವರ್ಷದ ಮೇಲ್ಪಟ್ಟವರ ತಂಡವನ್ನು ಆಶಾ ಶಂಕರ್, 60 ವರ್ಷ ಮೇಲ್ಪಟ್ಟ ತಂಡವನ್ನು ವಾಣಿ ಚಂಗಪ್ಪ ಹಾಗೂ 65 ವರ್ಷ ಮೇಲ್ಪಟ್ಟ ತಂಡವನ್ನು ಪುಷ್ಪಾ ಕುಟ್ಟಣ್ಣ ಮುನ್ನಡೆಸಿರುವುದು ಕೊಡಗಿಗೆ ಹೆಮ್ಮೆ. ಒತ್ತಡದ ಜವಾಬ್ದಾರಿಗಳ ನಡುವೆಯೂ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿರುವುದು ಅಭಿನಂದನೀಯ ಎಂದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಮಾಸ್ಟರ್ಸ್ ಮಹಿಳಾ ತಂಡದ ನಾಯಕಿ ಪುಷ್ಪಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದು ಸಹಜ. ಆದರೆ 55 ವರ್ಷದ ನಂತರ ವನಿತೆಯರು ಕ್ರೀಡೆಯಲ್ಲಿ ಕ್ರಿಯಾಶೀಲರಾಗಿ ಇರುವುದು ವಿಶೇಷ ಎಂದರು. ಹಿರಿಯ ವಯೋಮಾನದ ಪ್ರತಿಭೆಗಳಿಗೆ ಬಿಬಿಸಿ ಕ್ಲಬ್ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಿಬಿಸಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಚೆಪ್ಪುಡೀರ ಅಪ್ಪಣ್ಣ, ಉಪಾಧ್ಯಕ್ಷ ಬುಟ್ಟಿಯಂಡ ಚಂಗಪ್ಪ, ಪದಾಧಿ ಕಾರಿಗಳಾದ ಮನೆಯಪಂಡ ಮೋತಿ ಉತ್ತಪ್ಪ, ಪಳಂಗಂಡ ಸುರೇಶ್, ಕೇಚೆಟ್ಟಿರ ರವಿ, ತಿರುನೆಲ್ಲಿಮಾಡ ದೇವಯ್ಯ, ಆಯ್ಯಂಡ ಪೂವಯ್ಯ,ಕಂಜಿತಂಡ ಪೊನ್ನು, ಸೇರಿದಂತೆ ಇತರರು ಭಾಗವಹಿಸಿದ್ದರು.
ಬಾಸ್ಕೆಟ್ ಬಾಲ್ ತಂಡದ ಪಟುಗಳಾದ ಡಾ. ಪುಷ್ಪ ಕುಟ್ಟಣ್ಣ, ದಿವ್ಯಪೂಣಚ್ಚ, ವಾಣಿ ಚಂಗಪ್ಪ, ರಶ್ಮಿ ಅಯ್ಯಪ್ಪ, ಆಶಾ ಶಂಕರ್, ಜ್ಯೋತಿ ಪ್ರಕಾಶ್, ಜಮುನಾ ಚಂಗಪ್ಪ, ಶಿಲ್ಪಾ ಪೆಮ್ಮಯ್ಯ, ಜಮುನಾ ಸುರೇಶ್, ಗುಣಶೀಲಾ ಅಮರ್, ಕಾವೇರಿ ಅಚ್ಚಯ್ಯ, ಸಬಿತಾ ಪೂಣಚ್ಚ ಹಾಗೂ ರಶ್ಮಿ ಉತ್ತಪ್ಪ ಹಾಜರಿದ್ದರು.