ರಾಯಚೂರು ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವ ವಿಷಯದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಎಸ್‌ಟಿ ಸಮಾಜದ ಮೀಸಲಾತಿಗೆ ಅನ್ಯಾಯವಾಗಬಾರದೆಂದು ಕಳಕಳಿಯಿಂದ ಹೇಳಿದ್ದಾರೆಂದು ಅಖಿಲಾಂಡ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಹಾಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣದಲ್ಲಿಯೇ ಮೀಸಲು ಪಡೆಯುವದು ಸಮಾಜಕ್ಕೆ ಮಾಡುವ ಅನ್ಯಾಯವಾಗುತ್ತದೆ. ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸಿ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಬೇಕು. ಆದರೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವಾಗಲೇ ಎಸ್‌ಟಿ ಮೀಸಲು ಕಸಿಯುವದಿಲ್ಲ ಎಂಬ ಗ್ಯಾರಂಟಿ ನೀಡಬೇಕು.
ಆದರೆ ಕುರುಬ ಸಮಾಜ ಕುಲಶಾಸ್ತ್ರ ಅಧ್ಯಯನ ಸೇರಿದಂತೆ ನಿಯಮಗಳಿಗಳಂತೆ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದ್ದು ಕೇಂದ್ರ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಆದರೂ ಕುರುಬ ಸಮಾಜ ಎಸ್‌ಟಿಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿಕೆ ವಿರುದ್ದ ಕುರುಬ ಸಮಾಜದವರು ವಿರೋಧಿಸುತ್ತಿರುವದು ಸರಿಯಲ್ಲ. ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಿಸಲು ಕುರುಬ ಸಮಾಜ ಕೇಂದ್ರದ ಮೇಲೆ ಒತ್ತಡ ಹಾಕಬೇಕೆ ಹೊರತು ಇರುವ ಮೀಸಲಾತಿಯಲ್ಲಿಯೇ ಪಡೆದರೆ ನಾಯಕ ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ನಾಯಕ ವಕೀಲ, ವಿಸ್ವನಾಥ, ವಿರೇಶ ನಾಯಕ, ನರಸಿಂಹನಾಯಕ, ನರಸಿಂಹ ನಾಯಕ ಅಸ್ಕಿಹಾಳ ಇದ್ದರು.