ಜಿಲ್ಲೆ

ಸುಳ್ಳು ಭರವಸೆ ನೀಡುವುದನ್ನು ನಿಲ್ಲಿಸಲಿ

ಎನ್.ವೆಂಕಟೇಶ್

ಸರ್ಕಾರದ ವಿರುದ್ಧ ದಸಂಸ ಸಂಘಟನಾ ಸಂಚಾಲಕ ವೆಂಕಟರಮಣ ಆಕ್ರೋಶ ಮುಂದುವರಿದ ಧರಣಿ ಸತ್ಯಾಗ್ರಹ

ಬಾಗೇಪಲ್ಲಿ: ಏಳು ದಶಕ ಕಳೆದರೂ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಸಮಾನತೆ ಕಣ್ಣಿಗೆ ರಾಚುವಂತಿದ್ದರೂ ದಲಿತರ ಏಳಿಗೆಗಾಗಿ ಶ್ರಮಿಸುತ್ತೇವೆ ಎಂದು ಸುಳ್ಳು ಭರವಸೆ ನೀಡುವುದನ್ನು ಸರ್ಕಾರ ನಿಲ್ಲಿಸಬೇಕು. ಬದಲಾಗಿ ದಲಿತರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಕಾರ್ಯಪ್ರವೃತ್ತವಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬಿ.ವಿ.ವೆಂಕಟರಮಣ ಒತ್ತಾಯಿಸಿದರು.

ದಲಿತರ ಸಮಸ್ಯೆ, ದೌರ್ಜನ್ಯ, ಜಿಲ್ಲಾಡಳಿತದ ನಿರ್ಲಕ್ಷ್ಯ, ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ನೆಮ್ಮದಿ ಬದುಕಿಗಾಗಿ ಭೂಮಿ, ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ದಸಂಸ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಠಾವಧಿ ಧರಣಿಯ 2ನೇ ದಿನವಾದ ಮಂಗಳವಾರ ಸತ್ಯಾಗ್ರಹದಲ್ಲಿ ಮಾತನಾಡಿದರು.

ಭೂಮಿ ಮತ್ತು ವಸತಿ ವಂಚಿತರಿಗೆ ಜಿಲ್ಲಾಡಳಿತ ಭೂಮಿ ಮತ್ತು ವಸತಿ ಸೌಲಭ್ಯ ಕಲ್ಪಿಸದೆ ಅನ್ಯಾಯ ಮಾಡುತ್ತಿದ್ದರೂ ಸರ್ಕಾರ ಕ್ರಮ ಜರುಗಿಸುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಬಡವರ, ರೈತರ, ಅಲ್ಪಸಂಖ್ಯಾತರ ಕೆಲಸಗಳನ್ನು ಮಾಡಿಕೊಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ನಮೂನೆ 50, 53, 57ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ವರ್ಷಗಳೇ ಕಳೆದರೂ ಸಾಗುವಳಿ ಚೀಟಿ ನೀಡಿಲ್ಲ. ಜಮೀನುಗಳಿಗೆ ಖಾತೆ ಮಾಡಿಕೊಡದೆ ರೈತರು, ಭೂರಹಿತರನ್ನು ಅಲೆದಾಡಿಸಲಾಗುತ್ತಿದೆ. ಎಸ್‌ಟಿಪಿ, ಟಿಎಸ್‌ಪಿ ಯೋಜನೆಯ ಹಣ ದುರ್ಬಳಕೆ ಆಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ. ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಭವಷ್ಯಕ್ಕೆ ತೊಂದರೆಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸರ್ಕಾರ ಸುಳ್ಳು ಭರವಸೆ ನೀಡುತ್ತಲೇ ಕಾಲಹರಣ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ದಲಿತ ಸಂಘರ್ಷ ಸಮಿತಿಯ ಹಕ್ಕೊತ್ತಾಯಗಳನ್ನು ಈಡೇರಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗದಿದ್ದರೆ ಧರಣಿ ಮುಂದುವರಿಯಲಿದೆ ಎಂದರು.

ದಸಂಸ ತಾಲೂಕು ಸಂಚಾಲಕ ಪೈಪಾಳ್ಯ ರವಿ, ಮುಖಂಡರಾದ ಪ್ರಕಾಶ್, ಮಂಜುನಾಥ, ನಂಜುಂಡಪ್ಪ, ಸತೀಶ್, ಸೂರ್ಯನಾರಾಯಣ, ಚೌಡಪ್ಪ, ಶ್ರೀನಿವಾಸ, ಪಾತಪಾಳ್ಯ ಮೂರ್ತಿ, ಗಂಗರಾಜು, ಗಂಗಾಧರ ಮತ್ತಿತರರು ಇದ್ದರು.