ವಿಜಯಪುರ: ಶಿವಾಜಿ ಮಹಾರಾಜ ಬ್ಯಾಂಕ್ ಕೇವಲ ಲಾಭದ ಉದ್ದೇಶದಿಂದ ಮಾತ್ರ ಕಾರ್ಯ ನಿರ್ವಹಿಸದೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಅವಿರತ ಸೇವೆ ಸಲ್ಲಿಸುತ್ತಿದೆ ಎಂದು ಬ್ಯಾಂಕಿನ ಹಿರಿಯ ನಿರ್ದೇಶಕ ಡಾ. ಸದಾಶಿವ ಪವಾರ ಹೇಳಿದರು.
ನಗರದ ಎಂ.ಜಿ. ರಸ್ತೆಯ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸೈಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಂಘದ ಧರ್ಮಾರ್ಥ ನಿಧಿಯಿಂದ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘವು ಸ್ಥಾಪನೆಗೊಂಡ 28 ವರ್ಷಗಳಿಂದ ಜಿಲ್ಲೆಯ ವಿವಿಧ ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳಿಗೆ ತನ್ನ ಧರ್ಮಾರ್ಥ ನಿಧಿಯಿಂದ ದೇಣಿಗೆ ನೀಡುತ್ತ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಸಂಜಯ ಜಂಬೂರೆ ಮಾತನಾಡಿ, ಸಂಸ್ಥೆ ಆರಂಭದಿಂದಲೂ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವಿವಿಧ ಕಾರ್ಯಕ್ರಮ ಆಯೋಜಿಸಿ ಪ್ರತಿವರ್ಷವೂ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಪ್ರತಿಭಾ ಪುರಸ್ಕಾರ ರೂಪದಲ್ಲಿ ಗೌರವಧನ ನೀಡುತ್ತಲಿದೆ ಎಂದು ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಶಂಕರ ಕನಸೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಖಂಡಕಿ ಗ್ರಾಮದ ಕ್ಷತ್ರೀಯ ಮರಾಠ ಸಮಾಜ ವತಿಯಿಂದ ನಿರ್ಮಿಸುತ್ತಿರುವ ವಿಠ್ಠಲ ರುಕ್ಮಿಣಿ ದೇವಸ್ಥಾನಕ್ಕೆ ಸಂಘದ ವತಿಯಿಂದ 51,000 ಸಾವಿರ ರೂಗಳ ಚೆಕ್ ಅನ್ನು ಸಮಾಜದ ಅಧ್ಯಕ್ಷ ರಾಮು ಜಾಧವ ಅವರಿಗೆ ನೀಡಲಾಯಿತು. ಅಲ್ಲದೆ, ಸ್ಥಳೀಯ ಬಿಡಿಈ ಸಂಸ್ಥೆಯ ಪಿ.ಡಿ.ಜೆ. ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಸಂಘದಿಂದ 20 ಗೋಡೆ ಗಡಿಯಾರಗಳನ್ನು ಉಪ ಪ್ರಾಚಾರ್ಯ ಮುಕುಂದ ಆಲೂರ ಅವರಿಗೆ ವಿತರಿಸಲಾಯಿತು.
ಸಂಘದ ಆಡಳಿತ ಮಂಡಳಿ ಸದಸ್ಯರಾದ ಬಿ.ಟಿ. ತರಸೆ, ಡಾ. ಸದಾಶಿವ ಪವಾರ, ಮಹಾದೇವ ಪವಾರ, ಪ್ರವೀಣ ಬೋಡಕೆ, ರಾಮಚಂದ್ರ ಚವಾಣ, ರವಿ ಮಧಬಾವಿ, ಭಾರತ ದೇವಕುಳೆ, ಪಾಂಡುರಂಗ ರೋಹಿಟೆ, ಸರೋಜನಿ ನಿಕ್ಕಂ, ಅಂಬುತಾಯಿ ಜಾಧವ, ಸುರೇಖಾ ಕದಂ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ಸಹಾಯಕ ವ್ಯವಸ್ಥಾಪಕ ಅಂಬಾದಾಸ ಚವಾಣ ಮತ್ತಿತರರಿದ್ದರು.