ಜಿಲ್ಲೆ

ಸ್ತ್ರೀಯರಿಗೆ ಸಂವಿಧಾನದ ಪ್ರಕಾರ ಸಮಾನತೆ ನೀಡಿ: ನ್ಯಾ.ಬಿ.ಜಿ.ದಿನೇಶ್ ಅಭಿಪ್ರಾಯ

ಮೈಸೂರು: ಮಹಿಳೆಯರಿಗೆ ಪ್ರತ್ಯೇಕ ಸ್ಥಾನಮಾನ ನೀಡುವುದಕ್ಕೆ ಬದಲಾಗಿ, ಅವರಿಗೆ ಸಂವಿಧಾನದ ಪ್ರಕಾರ ಸಮಾನತೆ ನೀಡಿದರೆ ಸಾಕು. ಇದರಿಂದ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಬಿ.ಜಿ.ದಿನೇಶ್ ಅಭಿಪ್ರಾಯಪಟ್ಟರು.

ಕ್ರಿಯಾ ಸಂಸ್ಥೆಯು ಬೋಗಾದಿಯ ಕ್ರಿಯಾ ಶೈಕ್ಷಣಿಕ ಸಂಪನ್ಮೂಲ ಕೇಂದ್ರ (ಕೆಎಆರ್‌ಸಿ)ದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಕ್ರಿಯಾ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನೇಕ ಯೋಜನೆಗಳ ಸವಲತ್ತುಗಳು ಇದ್ದಾಗಿಯೂ ಮಹಿಳೆಯರು ಈಗಲೂ ಅಸುರಕ್ಷತೆಯ ವಲಯದಲ್ಲೇ ಇದ್ದಾರೆ. ಹಾಗಾಗಿ ಅವರಿಗೆ ಸಾಂವಿಧಾನಿಕ ರಕ್ಷಣೆಯ ಅಗತ್ಯವಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಾನಮಾನ ನೀಡುವುದಕ್ಕೆ ಬದಲಾಗಿ, ಅವರಿಗೆ ಸಂವಿಧಾನದ ಪ್ರಕಾರ ಸಮಾನತೆ ನೀಡಿದರೆ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ಸೇವೆ ಒದಗಿಸಲಾಗುತ್ತಿದ್ದು, ಈ ಸೌಲಭ್ಯಗಳನ್ನು ಅಗತ್ಯವಿರುವವರು ಬಳಸಿಕೊಳ್ಳಬೇಕು ಎಂದರು.

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಪ್ರತಿಯೊಬ್ಬರಲ್ಲೂ ಅಂತಃಶಕ್ತಿಯಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಒಳಿತಿಗೆ ಸೇವೆ ಮಾಡಬೇಕು. ಆಗ ಅದು ಸಾಧನೆಯಾಗುತ್ತದೆ. ನಾವು ಸಮಾಜಮುಖಿಯಾಗಿ ಕೆಲಸ ಮಾಡಿದರೆ, ನಮ್ಮೊಳಗೆ ಗಾಂಧಿ, ಬುದ್ಧ, ಬಸವ ನೆಲೆಸುತ್ತಾರೆ. ಆಗ ಸಾಂಸ್ಕೃತಿಕ ಗಟ್ಟಿತನ ದೊರಕುತ್ತದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಶೂದ್ರ ವರ್ಗದ ಅಪ್ರಾಪ್ತ ಹೆಣ್ಣು ಮಕ್ಕಳ ಮಾರಾಟ ದಂಧೆ ನಿರಂತರವಾಗಿ ನಡೆದಿದೆ. ಇದರಲ್ಲಿ ನಮ್ಮ ರಾಜ್ಯವೂ ಎರಡನೇ ಸ್ಥಾನದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆ ಮತ್ತು ಮಕ್ಕಳ ಪರವಾಗಿ ಇರುವ ಕಾನೂನುಗಳ ನೆರವಿನಿಂದ, ಅವರ ಮೇಲಿನ ದೌರ್ಜನ್ಯ ಮತ್ತು ಶೋಷಣೆಯನ್ನು ತಡೆಗಟ್ಟಬೇಕಿದೆ ಎಂದು ಸಲಹೆ ನೀಡಿದರು.

‘ಕ್ರಿಯಾ’ದ ಸಂಸ್ಥಾಪಕ ಪ್ರಸನ್ನಕುಮಾರ್ ಕೆರಗೋಡು ಪ್ರಾಸ್ತಾವಿಕವಾಗಿ ಕ್ರಿಯಾದ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಸಂಘಟಕ ಟಿ. ಸತೀಶ್ ಜವರೇಗೌಡ, ಪ್ರಾಧ್ಯಾಪಕ ಡಾ ಮಲ್ಲಿಕಾರ್ಜುನ್ ಹಿರೇಮಠ, ಡಾ ಪಿ.ಎನ್. ಹೇಮಚಂದ್ರ, ’ಕ್ರಿಯಾ’ದ ಪ್ರಧಾನ ಸಂಚಾಲಕ ಮಂದಾರ ಎಸ್. ಉಡುಪಿ ಮಾತನಾಡಿದರು.

‘ಕ್ರಿಯಾ’ದ ಸಂಚಾಲಕ ರಾಜೀಚ್ ಶರ್ಮ, ಎಸ್.ಎಲ್. ಆನಂದ್, ಸಂಚಾಲಕಿ ಸುಪ್ರಿಯ ಶಿವಣ್ಣ, ಲೇಖಕ ನೀ. ಗೂ. ರಮೇಶ್, ಕ್ರಿಯಾದ ಬಿ. ಕುಮಾರ್, ಬಿ. ರೇಖಾ, ಕೆ. ಲೋಕೇಶ್, ಬಿ. ಪುನೀತ್‌ಕುಮಾರ್ ಇತರರಿದ್ದರು.