ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಮಡಸನಾಳ ಗ್ರಾಮಸ್ಥರು ರೈತ ಮುಖಂಡ ಸತೀಶ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸುಭಾಸಗೌಡ ಪಾಟೀಲ, ವಿಠಲ ಭಜಂತ್ರಿ, ಮಾಸಿದ್ದ ಪೂಜಾರಿ ಮತ್ತಿತರರಿದ್ದಾರೆ.  
ಜಿಲ್ಲೆ

ಮಡಸನಾಳ ಗ್ರಾಮಸ್ಥರಿಗೆ ನೀರು ಕೊಡಿ, ಜಿಲ್ಲಾಡಳಿತಕ್ಕೆ ಸತೀಶ ಪಾಟೀಲ ಆಗ್ರಹ

ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಆಗ್ರಹಿಸಿ ಮಡಸನಾಳ ಗ್ರಾಮಸ್ಥರು ರೈತ ಮುಖಂಡ ಸತೀಶ ಪಾಟೀಲ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ವಿಜಯಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಮಡಸನಾಳ ಗ್ರಾಮದ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಮುಖಂಡ ಸತೀಶ ಪಾಟೀಲ ಮಾತನಾಡಿ, ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ತವರೂರಲ್ಲಿ ನೀರಿನ ಜ್ವಲಂತ ಸಮಸ್ಯೆ ಉಂಟಾಗಿರುವುದು ನಾಚಿಗೇಡಿತನವಾಗಿದೆ. ಸಾಕಷ್ಟು ಭಾರಿ ನೀರಿನ ತೊಂದರೆ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ. ಇದು ನಮ್ಮ ದೌರ್ಭಾಗ್ಯ ಎಂದರು.

ಶಾಸಕ ವಿಠಲ ಕಟಕದೊಂಡ ಕಾಣೆಯಾಗಿದ್ದಾರೆ. ಉಸ್ತುವಾರಿ ಮಂತ್ರಿಗಳು ಸಹ ನಿರ್ಲಕ್ಷೃ ವಹಿಸಿದ್ದಾರೆ. ಇದರಿಂದ ಜನ ಹಿಡಿಶಾಪ ಹಾಕುತ್ತಿದ್ದಾರೆ. ಮಡಸನಾಳ ಗ್ರಾಮಕ್ಕೆ ನಿರ್ಮಾಣವಾದ ಕೆರೆಗೆ ಪೈಪ್ ಲೈನ್ ಮುಖಾಂತರ ನೀರು ತುಂಬಿಸಿ ಶಾಶ್ವತ ನೀರಿನ ಸಮಸ್ಯೆ ಬಗೆ ಹರಿಸಬೇಕು. ತಕ್ಷಣ ಈ ಜ್ವಲಂತ ಸಮಸ್ಯೆಯನ್ನು ನಿವಾರಿಸಿ ಗ್ರಾಮಸ್ಥರಿಗೆ ನೀರಿನ ಅನುಕೂಲ ಮಾಡಿಕೊಡಬೇಕೆಂದರು.

ಗ್ರಾಮದ ಹಿರಿಯರಾದ ಸುಭಾಸಗೌಡ ಪಾಟೀಲ ಮಾತನಾಡಿ, ಊರಲ್ಲಿ ಕೆರೆ ನಿರ್ಮಾಣವಾಗಿ 3 ವರ್ಷ ಗತಿಸಿವೆ. ಆದರೂ ನೀರಿಲ್ಲ ಎಂದರು.

ಗ್ರಾಪಂ ಅಧ್ಯಕ್ಷ ವಿಠಲ ಭಜಂತ್ರಿ, ಸದಸ್ಯರಾದ ಮಾಸಿದ್ದ ಪೂಜಾರಿ, ಭೀಮರಾವ್ ಶಿಂಧೆ, ಪುಂಡಲೀಕ ಇಚ್ಚೂರ, ಬಂದು ಶಿಂಧೆ, ರವಿಕುಮಾರ ಭವಾನಿಮಠ, ಗಿರಿಮಲ್ಲಗೌಡ ಪಾಟೀಲ, ದತ್ತು ಕಾಂಬಳೆ, ಮಾಳಪ್ಪ ಹಿಪ್ಪರಗಿ, ರಫೀಕ ಮುಲ್ಲಾ ಮತ್ತಿತರರಿದ್ದರು.