ಕಾರವಾರ: ವಿವಿಧ ಇಲಾಖೆಗಳಲ್ಲಿ ಕರೊನಾ ಅವಧಿಯಲ್ಲೂ ಕಾರ್ಯನಿರ್ವಹಿಸಿದ ನಮಗೂ ಸರ್ಕಾರ ವಿಶೇಷ ಭತ್ಯೆ, ವಿಮಾ ಸೌಲಭ್ಯ ನೀಡಬೇಕು ಎಂದು ಗೃಹರಕ್ಷಕರು ಒತ್ತಾಯಿಸಿದ್ದಾರೆ.
ಪೊಲೀಸ್, ಆರ್ಟಿಒ, ಬಂದರು, ಜೈಲು ಹೀಗೆ ವಿವಿಧ ಇಲಾಖೆಗಳಲ್ಲಿ ಜಿಲ್ಲೆಯ ನೂರಕ್ಕೂ ಅಧಿಕ ಗೃಹರಕ್ಷಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರೊನಾ ಲಾಕ್ಡೌನ್, ನಂತರದ ಅನ್ಲಾಕ್ ಅವಧಿಯಲ್ಲೂ ಅವರು ಭಯ ಬಿಟ್ಟು ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಅವರನ್ನು ಕರೊನಾ ವಾರಿಯರ್ಸ್ ಎಂದು ಯಾರೂ ಪರಿಗಣಿಸಿಲ್ಲ. ವಿವಿಧ ವೃತ್ತಿಯಲ್ಲಿರುವವರಿಗೆ ಕರೊನಾ ವಾರಿಯರ್ಸ್ ಎಂದು ಗೌರವ, ಹಾಗೂ ಕೆಲವು ಸೌಲಭ್ಯಗಳನ್ನು ನೀಡಲಾಯಿತು. ಆದರೆ, ಗೃಹರಕ್ಷಕರಿಗೆ ಕಾರ್ವಿುಕ ಇಲಾಖೆಯಿಂದಲೂ, ಯಾವುದೇ ಸಂಸ್ಥೆಯಿಂದಲೂ ಕಿಟ್, ಅಥವಾ ಯಾವುದೇ ವಿಶೇಷ ಸೌಲಭ್ಯ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರೊನಾ ಸಮಯದಲ್ಲಿ ಕರ್ತವ್ಯ ನಿರ್ವಹಿಸಿ ತೊಂದರೆಗೆ ಈಡಾಗುವ ಸರ್ಕಾರಿ ಉದ್ಯೋಗಿಗಳಿಗಾಗಿ ಸರ್ಕಾರ ಇನ್ಶುರೆನ್ಸ್ ನೀಡಿದೆ. ಆದರೆ, ಗೃಹರಕ್ಷಕರಿಗೆ ಯಾವುದೇ ಅಂಥ ಯಾವುದೇ ಸೌಲಭ್ಯವಿಲ್ಲ. ಪಿಎಫ್ ಕೂಡ ಕಡಿತವಾಗದು ಎಂಬುದು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹರಕ್ಷಕರ ಅಳಲು.
ವೇತನ ವಿಳಂಬ: ಪೊಲೀಸ್ ಇಲಾಖೆ ಹೊರತುಪಡಿಸಿ ಇತರ ಇಲಾಖೆಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ಗೃಹರಕ್ಷಕರಿಗೆ ಪ್ರತಿ ದಿನಕ್ಕೆ 350 ರೂ.ನಂತೆ 10,500 ರೂ. ವೇತನ ನೀಡಲಾಗುತ್ತದೆ. ಗೃಹ ರಕ್ಷಕರ ಸೇವೆ ಪಡೆದ ಇಲಾಖೆ ವೇತನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತದೆ. ಆದರೆ, ಬಹುತೇಕ ಇಲಾಖೆಗಳು ವೇತನವನ್ನು ವಿಳಂಬವಾಗಿ ಹಾಕುತ್ತಿವೆ. ಬಂದರು ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಗೃಹರಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಲಭ್ಯವಾಗಿಲ್ಲ. ಪೊಲೀಸ್ ಇಲಾಖೆಯಲ್ಲೂ ಸರಿಯಾಗಿ ವೇತನ ಸಿಗುತ್ತಿಲ್ಲ. ಇಲ್ಲಿ ದುಡಿಯುವವರೆಲ್ಲರೂ ಬಡವರು. ಆ ತಿಂಗಳ ವೇತನ ಆ ತಿಂಗಳು ಸಿಗದೇ ಜೀವನ ಕಷ್ಟವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಗೃಹರಕ್ಷಕ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಐದು ತಿಂಗಳ ವೇತನ ವರ್ಷದಿಂದ ಬಾಕಿ : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಗೃಹರಕ್ಷಕರಿಗೆ 2019 ರ ಐದು ತಿಂಗಳ ವೇತನವನ್ನೇ ಬಾಕಿ ಉಳಿಸಿಕೊಳ್ಳಲಾಗಿದೆ. ಅನುದಾನದ ಕೊರತೆಯ ಕಾರಣ ನೀಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ 16 ಗೃಹರಕ್ಷಕರನ್ನು 2019 ರಿಂದ ಕೈಬಿಡಲಾಗಿತ್ತು. ಆದರೆ, ಅದಕ್ಕೂ ಪೂರ್ವದಲ್ಲಿ ಜೂನ್ನಿಂದ ಅಕ್ಟೋಬರ್ವರೆಗೆ ಕಾರ್ಯನಿರ್ವಹಿಸಿದ ವೇತನ ಪ್ರತಿಯೊಬ್ಬರಿಗೆ ಸುಮಾರು 57 ಸಾವಿರ ರೂ.ಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಕೋವಿಡ್ ಸಮಯದಲ್ಲಾದರೂ ಇದು ಸಿಗುವುದೇನೋ ಎಂದು ಆಸೆ ಪಟ್ಟಿದ್ದೆವು. ವರ್ಷ ಕಳೆದರೂ ವೇತನ ಸಿಗದ ಕಾರಣ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಗೃಹರಕ್ಷಕ ಸಿಬ್ಬಂದಿಯೊಬ್ಬರು.
ಯಾವ ಇಲಾಖೆ ಗೃಹರಕ್ಷಕರನ್ನು ಸೇವೆಗೆ ಪಡೆಯುತ್ತದೆಯೋ ಅದೇ ಇಲಾಖೆ ವೇತನವನ್ನು ಪಾವತಿಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಕೆಲವರಿಗೆ ವೇತನ ವಿಳಂಬವಾದ ಬಗ್ಗೆ ಆ ಇಲಾಖೆಗೆ ಪತ್ರ ಬರೆಯಲಾಗಿದೆ. ದೀಪಕ ಗೋಕರ್ಣ , ಗೃಹ ರಕ್ಷಕ ಕಮಾಂಡೆಂಟ್
ಕರೊನಾ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಿದ ಗೃಹರಕ್ಷಕರನ್ನು ಪ್ಯಾರಾ ಪೊಲೀಸ್ ಫೋರ್ಸ್ ಎಂದು ಹೆಸರು ಬದಲಿಸಬೇಕು. ಮತ್ತು ಅವರಿಗೆ ಆಶಾ ಕಾರ್ಯಕರ್ತೆಯರಿಗೆ ನೀಡುವಂತೆ ಗೌರವಧನ, ಆರೋಗ್ಯ ವಿಮಾ ಸೌಲಭ್ಯ ಒದಗಿಸಬೇಕು. ಮಾಧವ ನಾಯ್ಕ , ಜನಶಕ್ತಿ ವೇದಿಕೆ ಅಧ್ಯಕ್ಷ