ಅಂಗನವಾಡಿ ಕಾರ್ಯಕರ್ತೆಯರು ತೀರ್ಥಹಳ್ಳಿ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ರಜನಿ, ಕುಸುಮಾ, ಭಾಗ್ಯಾ ಇತರರಿದ್ದರು. 
ಜಿಲ್ಲೆ

ನಮಗೆ ಗೌರವಧನ ಬೇಡ ಸಂಬಳ ನೀಡಿ; ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

ತೀರ್ಥಹಳ್ಳಿ: ಎಳೆಯ ಮಕ್ಕಳ ಪಾಲನೆಯ ಜತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಬೇಡ, ವೇತನವನ್ನು ನೀಡಬೇಕು ಎಂದು ಎಐಟಿಯುಸಿ ತಾಲೂಕು ಅಧ್ಯಕ್ಷ ಗಾಯತ್ರಿ ಹೆಗಡೆ ಆಗ್ರಹಿಸಿದರು.

ತಾಲೂಕು ಕಚೇರಿ ಮುಂಭಾಗ ಶುಕ್ರವಾರರಾಜ್ಯ ಅಂಗನಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್(ಎಐಟಿಯುಸಿ) ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಆರನೇ ಗ್ಯಾರಂಟಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಆರೋಗ್ಯ, ಶಿಕ್ಷಣ, ಬಿಎಲ್‌ಒ, ಎಚ್‌ಎನ್‌ಎಸ್, ಸರ್ವೇ, ಜನಗಣತಿ ಇತರ ಸರ್ಕಾರಿ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಣೆ ಮಾಡುತ್ತಿದ್ದು ಸಂತೋಷ ಇದೆ. ಆದರೆ ಕೆಲಸಕ್ಕೆ ತಕ್ಕ ಸಂಬಳ ಸಿಗದೆ ಕಾರ್ಯಕರ್ತೆಯರು ಪರದಾಡುತ್ತಿದ್ದಾರೆ. ಕೇಂದ್ರಗಳ ಮೂಲ ಸೌಕರ್ಯ ಹೆಚ್ಚಿಸುವ ಜತೆಗೆ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ವೈದ್ಯಕೀಯ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ವ್ಯವಸ್ಥೆಗೆ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಹಿಂಪಡೆಯಬೇಕು. ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಹಾಗೂ ಯುಕೆಜಿಗೆ ವಿಶೇಷ ಸವಲತ್ತು ಒದಗಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ನೇಮಕ ಮಾಡಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲದಿಂದ ರಾಜ್ಯ ಸರ್ಕಾರ ಒತ್ತಡದಲ್ಲಿದೆ. ನೀವು ಜಾಸ್ತಿ ಕೆಲಸ ಮಾಡಿ ಕಡಿಮೆ ಸಂಬಳ ಪಡೆಯುತ್ತಿರುವ ವಿಚಾರದ ಸರ್ಕಾರದ ಗಮನದಲ್ಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಷಯ ತಿಳಿಸುವುದರ ಜತೆಗೆ ಅವರೊಂದಿಗೆ ನೇರ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತೇನೆ ಎಂದು ಮನವಿ ಸ್ವೀಕರಿಸಿದ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಕಾರ್ಯಕರ್ತೆಯರಿಗೆ ಭರವಸೆ ನೀಡಿದರು. ಕಾರ್ಯಕರ್ತೆಯರಾದ ರಜನಿ, ಕುಸುಮಾ, ಭಾಗ್ಯಾ ಇತರರಿದ್ದರು.