ಯಳಂದೂರು: ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪಾಲಕರು ಗಮನ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮನವಿ ಮಾಡಿದರು.
ಪಟ್ಟಣ ಪಬ್ಲಿಕ್ ಶಾಲೆಯಲ್ಲಿ ಬುಧವಾರ 2025-26ನೇ ಶೈಕ್ಷಣಿಕ ಸಾಲಿನ ಎಲ್ಕೆಜಿ ತರಗತಿಗೆ ವಿದ್ಯಾರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೇಲವು ಪಾಲಕ ವರ್ಗದವರು ಖಾಸಗಿ ಶಾಲೆಗಳ ಕಡೇ ಮುಖ ಮಾಡುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ, ಜತೆಗೆ ಬಿಸಿಯೂಟ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಶಾಲೆಯಲ್ಲಿ ಸಮವಸ್ತ್ರ ಸೇರಿದಂತೆ ಸಾಕಷ್ಟು ಅನುಕೂಲ ನೀಡುತ್ತಿದೆ, ಜತೆಗೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು ತೆರದು ಎಲ್ಕೆಜಿಯಿಂದ ಪಿಯುಸಿವರೆಗೂ ಇಂಗ್ಲಿಷ್ ಮಾಧ್ಯಮದಲ್ಲಿ ಮೂಲಕ ಕಲಿಕೆ ನೀಡುತ್ತಿದ್ದು, ಇದರಿಂದ ಶಾಲೆಗೆ ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ ಸರ್ಕಾರಿ ಶಾಲೆಗಳ ಕಡೇ ಪಾಲಕರು ತಮ್ಮ ಮಕ್ಕಳನ್ನು ಸೇರಿಸಿ ಜತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯವನ್ನು ಮಾಡುವ ಮೂಲಕ ಮಾದರಿ ಶಾಲೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿ, ಜಿಲ್ಲೆಯಲ್ಲಿ 4 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ತಾಲೂಕಿನ ಶಾಲೆಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು ಒಂದು ವಿಭಾಗದ ತರಗತಿಯನ್ನು ತೆರೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅನುಮತಿಯನ್ನೂ ನೀಡಿದ್ದಾರೆ. ಇದರಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬಹುದು. ಜತೆಗೆ ರಾಜ್ಯದಲ್ಲಿ 308 ಕರ್ನಾಟಕ ಪಬ್ಲಿಕ್ ಶಾಲೆ ಇದ್ದು, ಇದನ್ನು ಹೋಬಳಿ ಮಟ್ಟಕ್ಕೂ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಿದೆ. ಈ ನಿಮಿತ್ತ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕೆಸ್ತೂರು, ಕುದೇರು, ಹೊಂಗನೂರು ಗ್ರಾಮಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ನಿರ್ಮಿಸಿ ಗ್ರಾಮೀಣ ಮಟ್ಟದಲ್ಲೂ ಇಂಗ್ಲಿಷ್ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಜನರಿಗೆ ಉಚಿತವಾಗಿ ದೊರೆಯುವ ಸೌಲಭ್ಯ ಮಾಡಲಾಗುತ್ತಿದೆ. ಜತೆಗೆ ಜತೆಗೆ ಪಬ್ಲಿಕ್ ಶಾಲೆಯ ಆಟದ ಮೈದಾನ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ 84 ಲಕ್ಷ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಡಯಟ್ ಹಿರಿಯ ಉಪನ್ಯಾಸಕ ಅರಸಶೆಟ್ಟಿ, ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆಲ್ಮಸ್ ಬೇಗಂ, ಎಸ್ಡಿಎಂಸಿ ಅಧ್ಯಕ್ಷ ಜೈಗುರು, ಟಿಪಿಒ ಶಾಂತರಾಜು, ಸಿಆರ್ಪಿ ಯರಿಯೂರು ರೇಚಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಅಧಕ್ಷ ಅಮ್ಮನಪುರ ಮಹೇಶ್, ಪ್ರಾಥಮಿಕ ಶಾಲೆ ಶಿಕ್ಷಕ ಸಂಘದ ಅಧ್ಯಕ್ಷ ಸೋಮಣ್ಣ, ಶಾಲೆಯ ಮುಖ್ಯಶಿಕ್ಷಕರಾದ ಪುಟ್ಟಸಿದ್ದಮ್ಮ, ಮುಖಂಡರಾದ ರಾಜಶೇಖರ್ ಪಾಲಕರು ಇದ್ದರು.