ಜಿಲ್ಲೆ

ಜಂಕ್ ಫುಡ್ ಬಿಡಿ, ಸಾತ್ವಿಕ ಆಹಾರ ಸೇವಿಸಿ: ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಕಿವಿಮಾತು

ಬೆಂಗಳೂರು: ಜಂಕ್ ಫುಡ್‌ನಂತಹ ತಿನಿಸುಗಳಿಂದ ದೂರವಿದ್ದು, ಸಾತ್ವಿಕ ಆಹಾರವನ್ನು ಸೇವಿಸುವ ಮೂಲಕ ನಾಗರಿಕರು ಸಕ್ಕರೆ ಕಾಯಿಲೆಯಿಂದ ದೂರವಿರಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಜಯನಗರದ 9ನೇ ಬ್ಲಾಕ್‌ನಲ್ಲಿ ಶುಗರ್‌ಫಿಟ್ ಡಯಾಬಿಟೀಸ್ ರಿವರ್ಸಲ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಜೀವನಶೈಲಿಯಿಂದಾಗಿ ಹೆಚ್ಚು ಜನರು ಡಯಾಬಿಟಿಕ್ ರೋಗಿಗಳಾಗಿ ಬದಲಾಗಿದ್ದಾರೆ. ಅದರಲ್ಲೂ ನಗರವಾಸಿಗಳು ಬಿಪಿ, ಶುಗರ್‌ಗೆ ಒಳಗಾಗಿ ನಾನಾ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಿಂದ ದೂರವಿರಲು ನಿಯಮಿತವಾಗಿ ವ್ಯಾಯಾಮ, ಸರಿಯಾದ ಸಮಯಕ್ಕೆ ಉತ್ತಮ ಆಹಾರ ಸೇವಿಸುವುದು ಸೂಕ್ತ ಎಂದರು.

ಮಧುಮೇಹ ಕಾಯಿಲೆ ದೊಡ್ಡ ರೋಗ ಅಲ್ಲ. ಇದನ್ನು ವಾಸಿ ಮಾಡಿಕೊಳ್ಳಲು ದೊಡ್ಡ ಮೊತ್ತ ಖರ್ಚು ಮಾಡುವ ಅಗತ್ಯವೂ ಇಲ್ಲ. ನಮ್ಮ ದಿನಚರಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡಲ್ಲಿ ಸಕ್ಕರೆ ಕಾಯಿಲೆ ಹತ್ತಿರ ಸುಳಿಯದು. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬಾರದಂತೆ ಎಚ್ಚರ ವಹಿಸುವುದು ಯುಕ್ತ ಎಂದು ಎಂ.ಕೃಷ್ಣಪ್ಪ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಎಸ್.ಕೆ.ನಟರಾಜ್, ಸಮಾಜಸೇವಕ ಆರ್.ಬಾಲಾಜಿಸಿಂಗ್, ಸೆಂಟರ್‌ನ ಮುಖ್ಯಸ್ಥ ಮದನ್ ಸೋಮಸುಂದರಂ ಹಾಜರಿದ್ದರು.