ಜಿಲ್ಲೆ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ದುಶ್ಚಟಗಳ ತ್ಯಜಿಸಿ

ಸಿಂಧನೂರು; ವ್ಯಸನಮುಕ್ತರಾಗಿ ಉತ್ತಮ ಸಂಸ್ಕಾರ ರೂಢಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ ಎಂದು ಜಾಗತಿಕ ಲಿಂಗಾಯತ ಧರ್ಮದ ತಾಲೂಕು ಅಧ್ಯಕ್ಷ ವೀರಭದ್ರಗೌಡ ಅಮರಾಪುರ ಹೇಳಿದರು.

ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ನಿಮಿತ್ತ ನಗರದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಳಕಲ್ ಡಾ.ಮಹಾಂತ ಶಿವಯೋಗಿಗಳು ಹೊನ್ನು, ವಸ್ತ್ರ ಬೇಡಲಿಲ್ಲ. ಬದಲಾಗಿ ಸಾರ್ವಜನಿಕರ ದುಶ್ಚಟಗಳನ್ನು ತಮ್ಮ ಜೋಳಗಿಗೆ ಹಾಕುವಂತೆ ಕೇಳಿದರು. ಮದ್ಯ ಸೇವನೆ, ಜೂಜೂಟ ಸಮಾಜವನ್ನು ಹಾಳು ಮಾಡುತ್ತವೆ ಎಂದರು.

ಜಾಗತಿಕ ಲಿಂಗಾಯತ ಧರ್ಮ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಮಾತನಾಡಿ, ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಶರಣರ ವಚನದಂತೆ ಡಾ.ಮಹಾಂತಪ್ಪ ಅಪ್ಪ ಬದುಕಿದ್ದರು. ಅವರ ಮೇಲೆ ಕಲ್ಲು ತೂರಿದವರಿಗೂ ಶುಭವಾಗಲಿ ಎನ್ನುತ್ತಿದ್ದರು. ಜ್ಞಾನದ ಕೊರತೆಯಿಂದ ವ್ಯಕ್ತಿ ತಪ್ಪು ಮಾಡುತ್ತಾನೆ. ಅವರಿಗೆ ಜ್ಞಾನದ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎನ್ನುತ್ತಿದ್ದರು ಎಂದರು. ವಕೀಲ ನಿರುಪಾದೆಪ್ಪ ಗುಡಿಹಾಳ ಮಾತನಾಡಿದರು. ನೀಲಾಂಬಿಕಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಲ್ಕಂದಿನ್ನಿ ವಕೀಲ, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್, ಶಿರಸ್ತೇದಾರ್ ಅಂಬಾದಾಸ್, ಪ್ರಮುಖರಾದ ಬಸವಲಿಂಗಪ್ಪ ಬಾದರ್ಲಿ, ಕೆರೇಗೌಡ ಪೊಲೀಸ್ ಪಾಟೀಲ್, ಚಂದ್ರೇಗೌಡ ಹರೇಟನೂರು, ಭೀಮಣ್ಣ ಹೂಗಾರ್, ಎಚ್.ಜಿ.ಹಂಪಣ್ಣ ಇತರರಿದ್ದರು.