ಜಿಲ್ಲೆ

ತಾಲೂಕಿನ ಬಡವರಿಗೆ ಸೂಕ್ತ ನಿವೇಶನ ನೀಡಿ

ಕಡೂರು: 40 ಕ್ಕೂ ಹೆಚ್ಚು ವರ್ಷಗಳಿಂದ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದ ಬಡ ಜನರಿಗೆ ಸೂಕ್ತ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಸಮಿತಿ ಕಾರ್ಯಕರ್ತರು ಪಟ್ಟಣದ ಈದ್ಗಾನಗರದ ಸರ್ವೇ ನಂ. 53ರ ಪ್ರದೇಶದಲ್ಲಿನ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಜನಶಕ್ತಿ ಸಮಿತಿಯ ರಾಜ್ಯಾ ಉಪಾಧ್ಯಕ್ಷ ಗೌಸ್ ಮೊಹಿದ್ದೀನ್ ಮಾತನಾಡಿ, ಈ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ವಾಸಿಸುತ್ತಿದ್ದು ಬಡ ಕುಟುಂಬವನ್ನು 2018ರಲ್ಲಿ ಏಕಾಏಕಿ ಜೆಸಿಬಿ ಮೂಲಕ ಖುಲ್ಲಾ ಮಾಡಿಸಿದರು. ಕೆಲವರಿಗೆ ಜಾಗಕ್ಕೆ ಸಂಬಂಧಪಟ್ಟ ಹಕ್ಕುಪತ್ರಗಳು ಇದ್ದು ಕಂದಾಯ ಪಾವತಿ ಮಾಡುತ್ತಿದ್ದರೂ ಏಕಾಏಕಿ ಖುಲ್ಲಾ ಮಾಡಿ ಬದಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದರೂ ಯಾವುದೇ ಪ್ರಯೋಜನಕಾರಿಯಾಗಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇಲ್ಲಿನ ಬಡಕುಟುಂಬದ ಜನತೆಗೆ ನಿವೇಶ ನೀಡಬೇಕು ಎಂದು ಆಗ್ರಹಿಸಿದರು.
ಜನಶಕ್ತಿ ಸಮಿತಿ ತಾಲೂಕು ಅಧ್ಯಕ್ಷ ಮುನ್ನ ಮಾತನಾಡಿ, ಪಟ್ಟಣದ ಈದ್ಗಾನಗರದ ಸಮೀಪ ವಾಸವಾಗಿದ್ದ ಎಲ್ಲ ಕುಟುಂಬಗಳು ಅತಂತ್ರ ಪರಿಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಜೀವನ ನಡೆಸುವುದೇ ದೊಡ್ಡ ಸವಾಲಾಗಿ ಎದುರಾಗಿದೆ. ಕೊಳಚೆ ಪ್ರದೇಶದಿಂದ ಖುಲ್ಲಾ ಮಾಡಿರುವ ಕುಟುಂಬಗಳಿಗೆ ಸರ್ವೇ ನಂ. 53ರಲ್ಲಿ ನಿವೇಶನ ನೀಡಬೇಕು. ಇಲ್ಲವಾದರೆ ಪರ್ಯಾಯವಾಗಿ ಸರ್ವೇ. ನಂ 3ರಲ್ಲಿ ಸರ್ಕಾರಿ ಜಾಗವಿದ್ದು ಅದರಲ್ಲಿ ನಿವೇಶನ ಮಂಜೂರು ಮಾಡಬೇಕುದೆ ಎಂದರು.
ನಿವೇಶನ ದೊರಕಿಸಿಕೊಡುವಂತೆ ಒತ್ತಾಯಿಸಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾಗೆ ಮನವಿ ಸಲ್ಲಿಸಿದರು. ಡಿಎಸ್‌ಎಸ್ ಸಮಿತಿ ರಾಜ್ಯ ವಿಭಾಗೀಯ ಸಂಚಾಲಕ ಟಿ. ಮಂಜಪ್ಪ, ಮುಖಂಡರಾದ ಟಿ.ಲಕ್ಷಣ್, ಶ್ರೀಕಾಂತ್, ನಿರಂಜನಮೂರ್ತಿ, ರಘು, ಯಾಜ್, ಪ್ರದೀಪ್, ರಹ್ಮದ್ ಮತ್ತಿತರಿದ್ದರು.