ಜಿಲ್ಲೆ

ಹಳೆಯ ಹಂಚಿಕೆದಾರರಿಗೆ ಮೊದಲು ಸೈಟ್ ನೀಡಿ: ಡಿಸಿಎಂಗೆ ಶಾಸಕ ಸುರೇಶ್‌ಕುಮಾರ್ ಪತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಾರ್ವಜನಿಕರಿಗೆ ಈ ಹಿಂದೆ ನಿವೇಶನ ಹಂಚಿಕೆ ಮಾಡಿದ್ದರೂ, ಅರಣ್ಯ ಬಫರ್ ವಲಯ ಸೇರಿ ಇನ್ನಿತರ ತಾಂತ್ರಿಕ ಕಾರಣದಿಂದ ಮನೆಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯದಲ್ಲೇ ಡಾ. ಶಿವರಾಂ ಕಾರಂತ ಲೇಔಟ್‌ನಲ್ಲಿ ಹೊಸದಾಗಿ ಸೈಟ್ ಹಂಚಿಕೆ ಮಾಡಲಿರುವ ಹಿನ್ನೆಲೆಯಲ್ಲಿ ಮೊದಲು ದಶಕಗಳಿಂದ ಕಾಯುತ್ತಿರುವ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಕೋರಿ ಶಾಸಕ ಸುರೇಶ್‌ಕುಮಾರ್ ಅವರು ಡಿಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

2003-2004ರಲ್ಲಿ ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿ ಸೈಟ್ ಹಂಚಿಕೆ ಮಾಡಿದ್ದರೂ, ಹಲವರಿಗೆ ತುರಹಳ್ಳಿ ಅರಣ್ಯ ಪ್ರದೇಶ ಮತ್ತು ಬಫರ್ ವಲಯದಲ್ಲಿ ಸೈಟ್‌ಗಳನ್ನು ಹಂಚಿಕೆ ಮಾಡಿದ ಕಾರಣ ಇಂದಿಗೂ 1,500ಕ್ಕೂ ಹೆಚ್ಚು ಸೈಟ್‌ದಾರರು ತಮ್ಮ ಸ್ವಂತ ಸೂರು ಹೊಂದಲು ಸಾಧ್ಯವಾಗಿಲ್ಲ. 20 ವರ್ಷಗಳ ಬಳಿಕವೂ ನಗರಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಬಿಡಿಎ ಒಟ್ಟಿಗೆ ಕುಳಿತು ಚರ್ಚಿಸಿ ಜಮೀನಿನ ಮಾಲೀಕತ್ವದ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬಾರದಿರುವುದು ವಿಷಾದನೀಯ ಸಂಗತಿಯಾಗಿದೆ.

ಇದೇ ರೀತಿ ಭೂಸ್ವಾಧೀನಕ್ಕೆ ಸಂಬಂಧಿಸಿ ನ್ಯಾಯಾಲಯಗಳಲ್ಲಿ ಬಾಕಿಯಿರುವ ದಾವೆಗಳಿಂದಾಗಿ ಅರ್ಕಾವತಿ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ ಹಾಗೂ ಅಂಜನಾಪುರ ಲೇಔಟ್‌ನ ಅಂದಾಜು 5 ಸಾವಿರಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ಸಮಸ್ಯೆಗೆ ಒಳಗಾಗಿದ್ದಾರೆ. ಜಮೀನಿನ ನೈಜ ಸ್ವಾಧೀನದಲ್ಲಿಲ್ಲದ ಕಾರಣ ಈ ನತದೃಷ್ಟರು ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಪ್ರಾಧಿಕಾರದ ಉದಾಸೀನ ಹಾಗೂ ಬೇಜಾವ್ದಾರಿ ಮನಸ್ಥಿತಿಯಿಂದಾಗಿ ಜನರು ವಸತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ಅಂಶವನ್ನು ಶಾಸಕರು ಡಿಸಿಎಂ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತರಿಗೆ ಪರ್ಯಾಯ ಸೈಟ್ ನೀಡಿ:

ಪ್ರಸ್ತುತ ಕಾರಂತ ಬಡಾವಣೆಯಲ್ಲಿ ಲಭ್ಯವಿರುವ ಸೈಟ್‌ಗಳನ್ನು ಸಾರ್ವಜನಿಕರಿಂದ ಹಂಚಿಕೆ ಮಾಡಲು ಪ್ರಾಧಿಕಾರ ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುವ ಮುನ್ನ, ಈಗಾಗಲೇ ಹಂಚಿಕೆ ಪತ್ರ ಪಡೆದು ಸೈಟ್ ಸ್ವಾಧೀನತೆ ಪಡೆಯದ ಸಂತ್ರಸ್ತರಿಗೆ ಮೊದಲು ಪರ್ಯಾಯ ನಿವೇಶನ ನೀಡಬೇಕಾಗಿರುವುದು ಸಮಂಜಸ. ಇದಕ್ಕಾಗಿ ಎಲ್ಲ ಭೂಬಾಧಿತ ಸೈಟ್‌ದಾರರಿಂದ ಅರ್ಜಿ ಆಹ್ವಾನಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಹಂಚಿಕೆದಾರರಿಂದ ಭವಿಷ್ಯದಲ್ಲಿ ಕೋರ್ಟ್ ಮೊರೆ ಹೋಗುವುದನ್ನು ಪೂರ್ಣವಾಗಿ ನಿಲ್ಲಿಸಬಹುದು. ಮುಖ್ಯವಾಗಿ ಹಳೆಯ ಸೈಟ್ ಹಂಚಿಕೆದಾರರು ಶಾಪದಿಂದ ವಿಮುಕ್ತಿ ಪಡೆಯಲು ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಸುರೇಶ್‌ಕುಮಾರ್ ಒತ್ತಾಯಿಸಿದ್ದಾರೆ.