ಮದ್ದೂರು: ಮಂಡ್ಯ ತಾಲೂಕು ಹೊನಗಳ್ಳಿ ಮಠ ಎಲ್ಲೆಯ ರೈತರಿಗೆ ಆರ್.ಟಿ.ಸಿ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ವಿಶ್ವನಾಥ್ ಒತ್ತಾಯಿಸಿದರು.
ಮದ್ದೂರು ತಾಲೂಕಿನ ಸೊಳ್ಳೆಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 60 ಮತ್ತು 70 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತರಿಗೆ ಕಂಪ್ಯೂಟರ್ ಆರ್‌ಟಿಸಿ, ಪೋಡಿ ಮತ್ತು ಸ್ಕೆಚ್ ಸಹ ನೀಡದೆ ಇರುವ ಕಾರಣ ರೈತರು ಜಮೀನುಗಳನ್ನು ವಿಭಾಗ ಮಾಡಿಕೊಳ್ಳಲು, ಬ್ಯಾಂಕ್‌ಗಳಿಂದ ಸಾಲ ಪಡೆಯಲು, ಷೇರುದಾರರಾಗಲು, ಮಕ್ಕಳಿಗೆ ಸ್ಕಾಲರ್‌ಶಿಪ್ ಪಡೆಯಲು ಸಾಧ್ಯವಾಗದೆ ಹಲವಾರು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ಈಗಾಗಲೇ ಹಲವಾರು ಬಾರಿ ಸಂಬಂಧಪಟ್ಟಂತಹ ತಾಲೂಕು, ಜಿಲ್ಲಾ ಆಡಳಿತ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಯಾವ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವಾರ ನಡೆದ ಜನತಾ ದರ್ಶನದಲ್ಲಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, 15 ದಿನಗಳ ಒಳಗೆ ನಿಮ್ಮ ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ನೀಡಿದ್ದಾರೆ. ಆ ಕಾಲಾವಕಾಶ ಮುಗಿದ ನಂತರ ನಮ್ಮ ಸಮಸ್ಯೆ ಈಡೇರದಿದ್ದರೆ ಈ ಭಾಗದ ಎಲ್ಲ ರೈತರು ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ರೂಪಿಸಲು ಈ ಸಮಾವೇಶದಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸಮಿತಿ ರಚನೆ: ಸಮಸ್ಯೆ ಇತ್ಯರ್ಥಕ್ಕಾಗಿ ಮತ್ತು ಹೋರಾಟಕ್ಕಾಗಿ ನೂತನ ಹೊನಗಳ್ಳಿಮಠ ಎಲ್ಲೆಯ ರೈತರಿಗೆ ಆರ್‌ಟಿಸಿಯ ಹಕ್ಕಿಗಾಗಿ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಸದಸ್ಯರಾಗಿ ಬಾನುಚಂದ್ರ, ಮಹೇಶ್, ಆನಂದ್, ಶ್ರೀನಿವಾಸ್, ವೆಂಕಟೇಶ್, ಎಸ್.ಡಿ.ಪ್ರಕಾಶ್, ಎಸ್.ವಿಶ್ವನಾಥ್, ವೆಂಕಟೇಶ ಡೈರಿ, ಶಿವರಾಮ್ ಪಟೇಲ್, ವೆಂಕಟೇಶಬಾಬು, ಸಂಪತ್‌ಕುಮಾರ್, ಆನಂದ್, ಸುರೇಶ್, ನಂದಕುಮಾರ್, ರಮೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಸೊಳ್ಳೆಪುರ ಗ್ರಾಮದ ಬಾಲರಾಜು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್. ಭರತ್‌ರಾಜ್, ಮುಖಂಡರಾದ ವಿಶ್ವನಾಥ್, ಸೊ.ರಾ. ಶಿವರಾಂ, ವೆಂಕಟೇಶ್‌ಬಾಬು, ಎಸ್.ಸಿ.ರಮೇಶ್, ಶ್ರೀನಿವಾಸ್, ಎಸ್.ಪಿ.ಬಾಲರಾಜ್, ಪಟೇಲ್ ರಾಮಚಂದ್ರ, ಕಾಳಯ್ಯ, ಡಿ.ಕೃಷ್ಣಪ್ಪ, ದಿನೇಶ್, ಕರಡಣ್ಣಯ್ಯ, ನಂದಕುಮಾರ್ ಇದ್ದರು.