ಹಿರಿಯೂರು: ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಪದವಿ ನೀಡುವುದಕ್ಕೆ ಸೀಮಿತವಾಗದೆ, ಬದಲಾಗುತ್ತಿರುವ ಹವಮಾನಕ್ಕೆ ತಕ್ಕಂತೆ ಸಂಶೋಧನೆಗಳಿಗೂ ಹೆಚ್ಚಿನ ಒತ್ತು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತಾಲೂಕಿನ ಬಬ್ಬೂರು ಫಾರಂನಲ್ಲಿ ಶುಕ್ರವಾರ ಆಯೋಜಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭ, ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತಿನಲ್ಲಿ ಹವಮಾನ ಬದಲಾಗುತ್ತಿದೆ. ಈ ವೈಪರೀತ್ಯಕ್ಕೆ ಹೊಂದಿಕೊಳ್ಳುವ, ಬರ ಸಹಿಷ್ಣುತೆಯ ಹಾಗೂ ರೋಗ ನಿರೋಧಕ ಶಕ್ತಿವುಳ್ಳ, ಕೃಷಿ ಪೂರಕ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಇದಕ್ಕಾಗಿ ವಿಜ್ಞಾನಿಗಳು ಸಂಶೋಧನೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಿದ್ದು, ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರ್ಕಾರ ನೀಡಲಿದೆ. ಲ್ಯಾಬ್ ಟು ಲ್ಯಾಂಡ್ ಎಂಬಂತೆ, ಸಂಶೋಧನೆಗಳು ಪ್ರಯೋಗಾಲಯದಲ್ಲಿ ಉಳಿಯದೆ ಜಮೀನಲ್ಲಿ ಫಲಕಾಣಬೇಕು ಎಂದರು.
ಬರಗಾಲ, ಅತಿವೃಷ್ಟಿ, ಬೆಳೆಗೆ ತಕ್ಕ ಬೆಲೆ ದೊರಕದಿರುವುದು, ಹವಾಮಾನ ಬದಲಾವಣೆಗೆ ತಕ್ಕಂತೆ ಹೊಸ ತಳಿ ಸಿಗದಿರುವುದು, ಬೆಳೆ ದಾಸ್ತಾನಿಗೆ ಗೋದಾಮು ಕೊರತೆ ಹಾಗೂ ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ ಇಲ್ಲದೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು.
ಕೃಷಿ ಪುನಶ್ಚೇತನಕ್ಕೆ ವರವಾಗಬೇಕು. ವಿಸ್ತರಣಾ ಚಟುವಟಿಕೆಗಳು ಹೆಚ್ಚಾಗಬೇಕು. ಕೃಷಿ ಕ್ಷೇತ್ರದ ಬಲವರ್ಧನೆಯಿಂದ ದೇಶದ ಅಭಿವೃದ್ಧಿ ಹೆಚ್ಚಾಗಲಿದೆ. ದೇಶದ ಅಭಿವೃದ್ಧಿ ಹೇಗಿದೆ ಎಂದು ನೋಡಲು ಅಲ್ಲಿಯ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಎಷ್ಟರ ಮಟ್ಟಿಗೆ ಚೆನ್ನಾಗಿವೆ ಎಂಬುದನ್ನು ಗಮನಿಸಬೇಕಾಗುತ್ತದೆ ಎಂದರು.
ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1916ರಲ್ಲಿ ಸ್ಥಾಪನೆಯಾದ ಈ ಕೇಂದ್ರ ಶತಮಾನೋತ್ಸವ ಸಮಾರಂಭ, 2016ರಲ್ಲಿ ಯಾಕೆ ಆಗಲಿಲ್ಲ ಎಂದು ಪ್ರಶ್ನೀಸಿದ ಸಿಎಂ, 107 ವರ್ಷ ಪೂರೈಸಿರುವ ಈ ಕೇಂದ್ರದಲ್ಲಿ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಹೇಳಿದರು.
ನಮ್ಮ ಸರ್ಕಾರ ನೀರಾವರಿಗೆ ಒತ್ತು ನೀಡಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ನಾನು ರೈತರೊಂದಿಗೆ ಇದ್ದೇನೆ. ರಾಜ್ಯದ 236 ತಾಲೂಕು ಪೈಕಿ 195 ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ರಾಜ್ಯದ ಸಂಕಷ್ಟ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ 11 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದೆ. ಸದ್ಯದಲ್ಲೇ ನಡೆಯಲಿರುವ ಕ್ಯಾಬಿನೆಟ್ ಸಬ್ ಕಮಿಟಿಯ ಮತ್ತೊಂದು ಸಭೆಯಲ್ಲಿ 210-215 ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಿದೆ ಎಂದರು.
122 ವರ್ಷಗಳಲ್ಲೇ ಕಳೆದ ಆಗಸ್ಟ್‌ನಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಿದೆ. ರಾಜ್ಯದಲ್ಲಿ 80 ಲಕ್ಷ ಹೆಕ್ಟೇರ್ ಬಿತ್ತನೆಯಲ್ಲಿ 42 ಲಕ್ಷ ಹೆಕ್ಟೇರ್ (ಶೇ.52) ಬೆಳೆ ನಾಶವಾಗಿ 30 ಲಕ್ಷ ಕೋಟಿ ರೂ. ನಷ್ಟವಾಗಿದೆ. ಕೇಂದ್ರ-ರಾಜ್ಯಸರ್ಕಾರಗಳಿಂದ ಈ ನಷ್ಟ ಭರಿಸಲು ಸಾಧ್ಯವಾಗದು. ಎನ್‌ಡಿ ಆರ್‌ಎಫ್ ಮಾರ್ಗಸೂಚಿಯಂತೆ 4860 ಕೋಟಿ ರೂ. ಬೆಳೆ ನಷ್ಟ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಅಧ್ಯಯನ ತಂಡ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಬರವನ್ನು ಸಮರ್ಥವಾಗಿ ಎದುರಿಸ ಬೇಕೆಂದು ಎಲ್ಲ ಡಿಸಿ, ಜಿಪಂ ಸಿಇಒಗಳಿಗೆ ತಾಕೀತು ಮಾಡಿದ್ದೇನೆ. ಜನ, ಜಾನುವಾರುಗಳಿಗೆ ಕುಡಿವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮೇವು ಬೆಳೆಸಿ ಸಂಗ್ರಹಿಸಬೇಕು. ಸಮಸ್ಯೆಯಾದರೆ ಡಿಸಿ, ಸಿಇಒಗಳನ್ನೇ ಹೊಣೆ ಮಾಡಲಾಗುವುದು. ಕುಡಿವ ನೀರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ, ಬರವನ್ನು ಎದುರಿಸಲು ಹಣದ ಕೊರತೆ ಇಲ್ಲ. ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿಯಡಿ 150 ದಿನಗಳವರೆಗೆ ಕೆಲಸ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರು ಖುಷಿಯಾಗಿದ್ದಾರೆ. ಆದರೆ, ಪ್ರತಿಪಕ್ಷಗಳಿಗೆ ಬೇಸರವಾಗಿದೆ. ಜನವರಿಯಲ್ಲಿ ಯುವ ನಿಧಿ ಅನುಷ್ಠಾನಕ್ಕೆ ತರಲಾಗುವುದು. ಅನ್ನಭಾಗ್ಯಕ್ಕೆ ಅಕ್ಕಿ ಕೊಡದೆ ಕೇಂದ್ರ ರಾಜಕಾರಣ ಮಾಡುತ್ತಿದೆ. ಚಳ್ಳಕೆರೆಯಲ್ಲಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಹಿರಿಯೂರಿನಲ್ಲಿ ಕೃಷಿ ವಿಜ್ಞಾನ ಪದವಿ ಕಾಲೇಜು ಸ್ಥಾಪನೆ ಭರವಸೆ ನೀಡಿದರು.
ಸಿಎಂ ಡಾ.ಲೆಸ್ಲೀ ಕೋಲ್ಮನ್ ಶತಮಾನೋತ್ಸವ ಭವನ, ಕೃಷಿ ಯಂತ್ರೋಪಕರಣಗಳ ಪರೀಕ್ಷಾ ಕೇಂದ್ರ, ಶೇಂಗಾ ಸಂಸ್ಕರಣ ಘಟಕವನ್ನು ಉದ್ಘಾಟಿಸಿದರು. ವಿಶೇಷ ಅಂಚೆ ಲಕೋಟೆ ಹಾಗೂ ಭೂಪಟಗಳು, ಕೃಷಿ ಪ್ರಕಟಣೆಗಳನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವರಾದ ಎಚ್.ಆಂಜನೇಯ, ಎಚ್.ಏಕಾಂತಯ್ಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಡಿಸಿ ಜಿಆರ್‌ಜೆ ದಿವ್ಯಾಪ್ರಭು, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಬಬ್ಬೂರು ಗ್ರಾ ಪಂ ಅಧ್ಯಕ್ಷ ಪಿ.ಕರಿಯಣ್ಣ, ಕುಲಪತಿ ಡಾ.ಆರ್.ಸಿ.ಜಗದೀಶ್, ಡೀನ್ ಡಾ.ಕೆ.ಮಂಜಪ್ಪ, ಕೆವಿಕೆ ಮುಖ್ಯಸ್ಥ ಡಾ.ಒ. ಕುಮಾರ್, ಡಾ.ಓಂಕಾರಪ್ಪ, ಡಾ.ಪ್ರಕಾಶ್, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಎಚ್.ಆರ್.ತಿಮ್ಮಯ್ಯ,ರೈತ ಮುಖಂಡರಾದ ಕೆ.ಸಿ.ಹೊರಕೇಪ್ಪ, ಸಿದ್ದರಾಮಮಪ್ಪ ಇತರರಿದ್ದರು.
ರೈತರ ತ್ಯಾಗ: ರೈತರ ತ್ಯಾಗದಿಂದ ಮಹಾರಾಜರ ಕಾಲದಲ್ಲಿ ಬಬ್ಬೂರಲ್ಲಿ ಕೃಷಿ ವಿಜ್ಞಾನಗಳ ಸಂಶೋಧನಾ ಕೇಂದ್ರ ಸ್ಥಾಪನೆಯಾಗಿದೆ. ಪ್ರಸ್ತುತ ಪರಿವರ್ತನೆಯಾಗಿರುವ ಕೃಷಿ ವಿಜ್ಞಾನ-ಸಂಶೋಧನಾ ಕೇಂದ್ರವನ್ನು ಮೇಲ್ದರ್ಜೆಗೇರಿಸಲು 27 ಕೋಟಿ ರೂ., ಹಿರಿಯೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 45 ಕೋಟಿ ರೂ.ಅನುದಾನ ಹಾಗೂ ನಗರದಲ್ಲಿ ಹೈಟೆಕ್‌ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅನುದಾನ ನೀಡುವಂತೆ ಸಿಎಂ ಅವರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮನವಿ ಮಾಡಿದರು.
ತೆಂಗು ಬೆಳೆಗಾರರಿಗೆ ಫ್ಯಾಕೇಜ್ ಘೋಷಿಸಿ: ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ಹಾಗೂ ಹಿರಿಯೂರು ಭಾಗದಲ್ಲಿ ತೆಂಗಿಗೆ ಕಪ್ಪು ತಲೆ ಹುಳುವಿನ ರೋಗ ಕಾಣಿಸಿದೆ. ಇದರಿಂದಾಗಿ ತೆಂಗಿನ ಮರಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ,ರೋಗ ನಿವಾರಣೆಗೆ ಔಷಧ ಸೇರಿ ತೆಂಗಿನ ತೋಟಗಳ ಪುನಶ್ಚೇತನಕ್ಕೆ ಸೂಕ್ತ ಫ್ಯಾಕೇಜ್ ಘೋಷಿಸುವಂತೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮನವಿ ಮಾಡಿದರು. ತೆಂಗಿಗೆ ತಗುಲಿರುವ ರೋಗ ನಿವಾ ರಣೆಗೆ ವಿಜ್ಞಾನಿಗಳು ನೆರವಾಗ ಬೇಕು.ಕೊಬ್ಬರಿ ಬೆಲೆ ಕುಸಿತ ತಡೆಗೆ ಸರ್ಕಾರ ಮಧ್ಯ ಪ್ರವೇಶಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಕೋರಿದರು.
ಜಲಾಶಯಕ್ಕೆ 6 ಟಿಎಂಸಿ ಅಡಿ ನೀರು: ಬಯಲುಸೀಮೆ ಜಲಪಾತ್ರೆ ವಿವಿ ಸಾಗರ ಜಲಾಶಯಕ್ಕೆ ಎತ್ತಿನಹೊಳೆಯಿಂದ 3 ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ 3 ಟಿಎಂಸಿ ಅಡಿ ನೀರು ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಜಾರಿಗೆ ಬದ್ಧ ಎಂದು ಸಿದ್ದರಾಮಯ್ಯ ಹೇಳಿದರು.
ಸಕ್ಕರೆ ಕಾರ್ಖಾನೆ ಪುನಶ್ವೇತನ: ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನಶ್ವೇತನಕ್ಕೆ ರೈತರು ಮನವಿ ಮಾಡಿದ್ದಾರೆ. ಸರ್ಕಾರ ಕಾರ್ಖಾನೆ ನಡೆಸುವುದು ಕಷ್ಟ,ಖಾಸಗಿಯ ವರು ಮುಂದೆ ಬಂದರೆ ಪರಿಶೀಲಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.