ವಿಜಯಪುರ: ವಿದ್ಯಾರ್ಥಿಗಳಿಗೆ ಅಂಕ ಆಧಾರಿತ ಶಿಕ್ಷಣದ ಬದಲು ಜೀವನವನ್ನು ಸಮರ್ಥವಾಗಿ ನಿಭಾಯಿಸಲು ಬೇಕಾದ ಕೌಶಲಪೂರಿತ ವೃತ್ತಿ ಶಿಕ್ಷಣದ ಕಡೆಗೆ ಗಮನಹರಿಸಬೇಕು. ಶಿಕ್ಷಣ ಪಡೆದ ವ್ಯಕ್ತಿ ಉದ್ಯೋಗ ಬೇಡುವಂತಾಗಬಾರದು ಬದಲಿಗೆ ಇತರರಿಗೆ ಉದ್ಯೋಗ ನೀಡುವಂತವನಾಗಬೇಕು ಎಂದು ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಿ.ಎಸ್. ಬೆಳಗಲಿ ಹೇಳಿದರು.
ನಗರದ ಪಿಡಿಜೆ ಪದವಿ ಪೂರ್ವ ಮಹಾವಿದ್ಯಾಲಯ ಮಾಧ್ಯಮಿಕ ವಿಭಾಗದ 2022-23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ ನಗದು, ಬೌದ್ಧಿಕ, ಶಾರೀರಿಕ ಚಟುವಟಿಕೆಗಳ ಪಾರಿತೋಷಕ ವಿತರಣಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಅರಿತು ಅಂತರ್ಗತ ಮಾಡಿಕೊಂಡು ಮಾನವೀಯ ಮೌಲ್ಯಗಳೊಂದಿಗೆ, ಬಾಳಿ ಬದುಕಿದರೆ ಜೀವನವು ದೇದೀಪ್ಯಮಾನವಾಗಿ ಬೆಳಗಬಲ್ಲದು. ಬದುಕಿನ ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಆತ್ಮವಿಶ್ವಾಸ, ಪ್ರತಿಯೊಂದನ್ನು ಅರ್ಥೈಸಿಕೊಳ್ಳುವ ಜಾಣ್ಮೆ, ಗುರಿ ಈಡೇರಿಸಿಕೊಳ್ಳುವ ಬದ್ಧತೆ. ಹೊಸ ದೃಷ್ಟಿಕೋನವುಳ್ಳ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಬಾಳಿನ ಉತ್ತುಂಗಕ್ಕೇರಲು ಪ್ರಯತ್ನಿಸಬೇಕು ಎಂದರು.
ಬಿಡಿಈ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಕುಲಕರ್ಣಿ (ಮಮದಾಪೂರ) ಮಾತನಾಡಿ, ಪಾಲಕರ ಆಜ್ಞಾಧಾರಕರಾಗಿ, ಶಿಕ್ಷಕರಿಗೆ ವಿಧೇಯಕರಾಗಿ, ಉತ್ತಮ ಶಿಕ್ಷಣದೊಂದಿಗೆ ದೇಶಭಕ್ತಿಯನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಒಳ್ಳೆಯ ನಾಗರಿಕರಾಗಲು ಸಾಧ್ಯವಾಗುತ್ತದೆ. ನಿರ್ದಿಷ್ಟ ಗುರಿ, ಸತತ ಪ್ರಯತ್ನದಿಂದ ಯಶಸ್ಸು ಶತಸಿದ್ಧ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಎ.ಡಿ. ದೇಶಪಾಂಡೆ, ಪಪೂ ಕಾಲೇಜು ಪ್ರಾಚಾರ್ಯೆ ದೇವಿಕಾ ಕುಲಕರ್ಣಿ, ಎಸ್.ಎಲ್. ಜಾಲವಾದಿ, ವಿದ್ಯಾರ್ಥಿ ಪ್ರತಿನಿಧಿ ಆಕಾಶ ಸಪ್ಪಡ್ಲ ವೇದಿಕೆ ಮೇಲಿದ್ದರು. ಪಿ.ಎಸ್. ವಾಳ್ವೇಕರ ಹಾಗೂ ವೈ.ಎಸ್. ಕುಲಕರ್ಣಿ ನಗದು ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಉಪಪ್ರಾಚಾರ್ಯ ಎಂ.ಎ. ಆಲೂರ ಸ್ವಾಗತಿಸಿದರು. ಆರ್.ಎಂ. ಲಿಂಗದಳ್ಳಿ ಪರಿಚಯಿಸಿದರು. ವಿ.ಆರ್. ಕಟ್ಟಿ ಮತ್ತು ಎಸ್.ಆರ್. ಜಹಾಗೀರದಾರ ನಿರೂಪಿಸಿದರು. ಆರ್.ಎ. ಕುಲಕರ್ಣಿ ವಂದಿಸಿದರು.