ರೋಣ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಉತ್ತಮ ಕಟ್ಟಡ ನಿರ್ವಣದಲ್ಲಿ ಗ್ರಾಮಸ್ಥರ ಪಾತ್ರವೂ ಪ್ರಮುಖವಾಗಿದೆ. ಗ್ರಾಮದಲ್ಲಿ ನಡೆಯುವ ಕಾಮಗಾರಿಗಳನ್ನು ಸಾರ್ವಜನಿಕರು ಆಗಾಗ ಪರಿಶೀಲಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಮಾಳವಾಡ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಸಮುದಾಯ ಭವನ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಈ ಹಿಂದೆ ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ. ಈಗ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಸಿಎಂ ಹಾಗೂ ಡಿಸಿಎಂ ಅವರ ಬಳಿ ತೆರಳಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುತ್ತೇನೆ ಎಂದರು.
ಯಾ.ಸ.ಹಡಗಲಿ ಗ್ರಾಮದಲ್ಲಿ 2022-23ನೇ ಸಾಲಿನ ವಿವೇಕ ಯೋಜನೆ ಅನುದಾನದಡಿ ಲೋಕೋಪಯೋಗಿ ಇಲಾಖೆ ವತಿಯಿಂದ 27. 80 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ವಿುಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದೆ. ಮಕ್ಕಳು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬಿಇಒ ಅರ್ಜುನ ಕಾಂಬೋಗಿ, ಎಂ.ಎ. ಫನಿಬಂದ, ಜಿ.ಪಿ. ಪಾಟೀಲ, ಶಿವಕುಮಾರ ನೀಲಗುಂದ, ಈರಪ್ಪ ತಾಳಿ, ಅಶೋಕ ಹೆಬ್ಬಳ್ಳಿ, ಸೋಮು ಚರದ, ಚಂದ್ರಶೇಖರ ಮಾದರ, ಪರಸಪ್ಪ ಮಾದರ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿದ್ದರು.