ಜಿಲ್ಲೆ

ಕಣ್ಣಿನ ಸುರಕ್ಷತೆಗೆ ಆದ್ಯತೆ ನೀಡಲು ಸಲಹೆ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಲಯನ್ಸ್ ವೆಸ್ಟ್ ಕಣ್ಣಿನ ಆಸ್ಪತ್ರೆ ವೈದ್ಯೆ ಡಾ.ಚೈತ್ರಾ ಉದ್ಘಾಟಿಸಿ ಮಾತನಾಡಿ, ಮಾನವ ಅಂಗಗಳಲ್ಲಿ ಕಣ್ಣು ಅಮೂಲ್ಯವಾದುದು. ಕಣ್ಣಿನ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.


ಲಯನ್ಸ್ ಆಸ್ಪತ್ರೆ ಟ್ರಸ್ಟಿ ಚನ್ನಮಾದೇಗೌಡ ಮಾತನಾಡಿ, ಕ್ಲಬ್‌ನಿಂದ ಈವರೆಗೂ ಒಟ್ಟು 238 ಶಿಬಿರ ನಡೆಸಿದ್ದು ಅದರಲ್ಲಿ ಸುಮಾರು 1.31 ಲಕ್ಷದಷ್ಟು ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 11,500 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಿಬಿರದಲ್ಲಿ 35 ಜನರು ಚಿಕಿತ್ಸೆಗೆ ಒಳಪಟ್ಟಿದ್ದು ಅದರಲ್ಲಿ 20 ಜನರನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು. ಅದಲ್ಲದೆ, ವಯನಾಡುನಲ್ಲಿ ಉಂಟಾದ ಪ್ರಕೃತಿ ವಿಕೋಪಕ್ಕೆ ಇಂಟರ್‌ನ್ಯಾಷನಲ್ ಲಯನ್ಸ್ ಕ್ಲಬ್‌ನಿಂದ 8 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದರು.


ಕ್ಲಬ್ ಕಾರ್ಯದರ್ಶಿ ಇಂದ್ರೇಶ್, ಲಯನ್ಸ್ ಎಜುಕೇಷನ್ ಸೊಸೈಟಿ ಖಜಾಂಚಿ ಎಸ್.ನಾಗರಾಜು ಕೊಂಗರಹಳ್ಳಿ, ಡಿಸ್ಟಿಕ್ ಕ್ಯಾಬಿನೆಟ್ ಸೆಕ್ರೆಟರಿ ಜಿ.ಎಸ್.ಮಹದೇವ ಪ್ರಸಾದ್, ಸದಸ್ಯರಾದ ವೇಣುಗೋಪಾಲ್, ಚೇತನ್, ನಾಗಬಸವ ಲಿಂಗಪ್ಪ, ಗಿರಿರಾಜ್ ಇದ್ದರು.