ಜಿಲ್ಲೆ

ಕಂಪನಿಗೆ ಅನುಮತಿ ಪತ್ರ ನೀಡಿ: ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ

ಮೈಸೂರು: ಪೈಪ್‌ಲೈನ್ ಮೂಲಕ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲ (ಪಿಎನ್‌ಜಿ) ಪೂರೈಸುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅನುಷ್ಠಾನಕ್ಕಾಗಿ ಪೈಪ್‌ಲೈನ್ ಅಳವಡಿಸಲು ಬಳಸಿಕೊಳ್ಳುವ ಜಾಗಕ್ಕೆ ಪಾಲಿಕೆಗೆ ನೀಡಬೇಕಾದ ಹಣದ ಪರಿಷ್ಕೃತ ದರ ಸಂಬಂಧ ಸರ್ಕಾರ ಇತ್ತೀಚೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಕಾಮಗಾರಿ ಕೈಗೊಳ್ಳಲು ಕಂಪನಿಗೆ ಅನುಮತಿ ಪತ್ರ ನೀಡುವಂತೆ ಸಂಸದ ಪ್ರತಾಪ್‌ಸಿಂಹ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಪಾಲಿಕೆ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬುಧವಾರ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ನಗರದ ಜನತೆಗೆ ಇದು ಅತ್ಯಂತ ಅವಶ್ಯಕವಾದ ಯೋಜನೆಯಾಗಿದೆ. ಗ್ರಾಹಕರಿಗೆ ನಿರಂತರವಾಗಿ ಅನಿಲ ಪೂರೈಕೆ ಆಗಲಿದೆ. ಸಿಲಿಂಡರ್ ಬುಕ್ ಮಾಡುವ ಅವಶ್ಯಕತೆ ಇರುವುದಿಲ್ಲ. ಎಲ್‌ಪಿಜಿ ಅಡುಗೆ ಅನಿಲಕ್ಕಿಂತ ಎಲ್‌ಎನ್‌ಜಿ ಅಡುಗೆ ಅನಿಲ ಕಡಿಮೆ ದರಕ್ಕೆ ದೊರೆಯಲಿದೆ. ಎಲ್‌ಎನ್‌ಜಿ ಅಡುಗೆ ಅನಿಲ ಪರಸರ ಸ್ನೇಹಿಯೂ ಅಗಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಆತಂಕಪಡುವ ಅವಶ್ಯಕತೆ ಇಲ್ಲ. ಇಂತಹ ಯೋಜನೆಗೆ ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ಸಹಕಾರ ದೊರೆಯಬೇಕು ಎಂದು ಸೂಚಿಸಿದರು.