ವಿಪ್ರ ಸಮಾಜದ ಪ್ರಮುಖರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದರು. ಡಾ. ಪಿ.ನಾರಾಯಣ್, ಎಂ.ಆರ್.ಸತ್ಯನಾರಾಯಣ್, ಡಾ. ಕೆ.ಆರ್.ಶ್ರೀಧರ್, ವೆಂಕಟೇಶ ರಾವ್, ಎಂ.ಶಂಕರ್ ಇತರರಿದ್ದರು.  
ಜಿಲ್ಲೆ

ದತ್ತಾತ್ರಿಗೆ ಎಂಎಲ್‌ಸಿ ಟಿಕೆಟ್ ಕೊಡಿಸಿ: ಬಿಎಸ್‌ವೈಗೆ ಒತ್ತಾಯ

ಶಿವಮೊಗ್ಗ: ಬ್ರಾಹ್ಮಣ ಸಮಾಜದ ಪ್ರಮುಖರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ದತ್ತಾತ್ರಿ ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿರುವುದನ್ನು ವರಿಷ್ಠರ ಗಮನಕ್ಕೆ ತರಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ತಮ್ಮ ನಿವಾಸಕ್ಕೆ ಶನಿವಾರ ಆಗಮಿಸಿದ ಬ್ರಾಹ್ಮಣ ಸಮಾಜದ ಪ್ರಮುಖರೊಂದಿಗೆ ಬಿಎಸ್‌ವೈ ಸಭೆ ನಡೆಸಿದರು. ಈ ಸಭೆಯಲ್ಲಿ ಹಲವು ಮಂದಿ ಎಸ್.ದತ್ತಾತ್ರಿಗೆ ಪರಿಷತ್ ಚುನಾವಣೆಗೆ ಟಿಕೆಟ್ ಕೊಡಿಸಬೇಕೆಂದು ಆಗ್ರಹಿಸಿದರು. ಹಲವು ವರ್ಷಗಳಿಂದ ಜಿಲ್ಲಾ ಬಿಜೆಪಿಯ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸಿರುವ ದತ್ತಾತ್ರಿ, ಹಲವು ಬಾರಿ ಟಿಕೆಟ್ ವಂಚಿತರಾಗಿದ್ದಾರೆ ಎಂದು ಬಿಎಸ್‌ವೈ ಗಮನಸೆಳೆದರು.
ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ನಿಮ್ಮೆಲ್ಲರ ಅನಿಸಿಕೆಗಳನ್ನು ಯಾರ ಬಳಿ ಪ್ರಸ್ತಾಪಿಸಬೇಕೋ ಅಲ್ಲಿ ಹಂಚಿಕೊಳ್ಳುತ್ತೇನೆ. ನನ್ನಿಂದ ದತ್ತಾತ್ರಿ ಅವರ ಸ್ಪರ್ಧೆಗೆ ಏನು ಸಹಾಯ ಮಾಡಲು ಸಾಧ್ಯವಿದೆಯೋ ಅದನ್ನು ಪ್ರಯತ್ನಿಸುತ್ತೇನೆ. ಅವರು ಸಂಘಟನೆಗಾಗಿ ಮಾಡಿರುವ ಕೆಲಸಗಳನ್ನು ನಾಯಕರ ಗಮನಕ್ಕೆ ತರುತ್ತೇನೆ ಎಂದರು.
ವಿಪ್ರ ಸಮಾಜದ ಪ್ರಮುಖರಾದ ಡಾ. ಪಿ.ನಾರಾಯಣ್, ಡಾ. ಕೆ.ಆರ್.ಶ್ರೀಧರ್, ಎಂ.ಆರ್.ಸತ್ಯನಾರಾಯಣ್, ಎಂ.ಶಂಕರ್, ಡಾ. ಶ್ರೀಧರ್, ವೆಂಕಟೇಶ ರಾವ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.