ಸರ್ಜಾಪುರ : ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧಿನ ವಿರೋಧಿಸಿ ಮುತ್ತನಲ್ಲೂರು ಗ್ರಾಮದಲ್ಲಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹವು ಗುರುವಾರ 30 ದಿನ ಪೂರೈಸಿದ್ದು, ಖ್ಯಾತ ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಮ್, ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಭಾಗಿಯಾಗಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು. 30ನೇ ದಿನದ ಹೋರಾಟದ ವಿಶೇಷವಾಗಿ ಕೆಐಎಡಿಬಿ ಭೂಸ್ವಾಧಿನ ವಿರೋಧಿಸಿ ಪ್ರತಿಭಟನಾ ಕವಿಗೋಷ್ಠಿ ಹಾಗೂ ರೈತ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿರ್ದೇಶಕ ಟಿ.ಎನ್.ಸೀತಾರಾಮ್ ಮಾತನಾಡಿ, ಇಲ್ಲಿನ ರೈತರ ಕಣ್ಣುಗಳಲ್ಲಿ ಭಾವದ ಕೋಡಿ ಕಾಣಿಸುತ್ತಿದೆ, ರೈತರು ಭೂಮಿಯ ಜತೆಗೆ ಸಂಬಂಧಬೇಕು ಎಂಬ ಚಿಂತನೆಯೊಂದಿಗೆ 30 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ರೈತನಿಗೆ ಮಣ್ಣು ಮತ್ತು ಪ್ರಕೃತಿಯ ಜತೆಗೆ ಇರುವ ಬಾಂಧವ್ಯ ಹೇಳಲಾಗದು ಎಂದರು. ಮುತ್ತನಲ್ಲರು ಗ್ರಾಮಕ್ಕೂ ನನಗೂ ಅನಾದಿಕಾಲದಿಂದಲೂ ನಂಟು ಇದ್ದು, ಈ ಗ್ರಾಮಗಳಲ್ಲಿ ಯಥೇಚ್ಛವಾಗಿ ರೇಷ್ಮೆ ಬೆಳೆಯುತ್ತಿದ್ದರು, ಎಂ.5 ಎಂಬ ರೇಷ್ಮೆ ಕಡ್ಡಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ನಮ್ಮತೋಟದಲ್ಲಿ ಬೆಳೆಸಲಾಗಿತ್ತು. ಹಾಗಾಗಿ ಈ ಭಾಗದ ರೈತರೊಂದಿಗೆ ಸದಾ ಜತೆಯಲ್ಲಿ ಇರುತ್ತೇವೆ ಮುಂದಿನ ದಿನಗಳಲ್ಲಿ ಸರ್ಕಾರದ ಗಮನಕ್ಕೂ ತರುತ್ತೇವೆ ಎಂದರು. ಪ್ರತಿಭಟನೆಯಲ್ಲಿ ಆನೇಕಲ್ ತಾಲೂಕು ಭೂ ಸ್ವಾಧಿನ ವಿರೋಧಿ ಹೋರಾಟ ಸಮಿತಿಯ ಗೌರವಾಧ್ಯರಾದ ವಿಶ್ವನಾಥ್ರೆಡ್ಡಿ, ಅಧ್ಯ ದೇವರಾಜ್, ಸಂಚಾಲಕರಾದ ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ಪದಾಧಿಕಾರಿಗಳಾದ ಅಶೋಕ್ ರೆಡ್ಡಿ, ಉಮೇಶ್ಬಾಬು, ನಿರ್ಮಲ, ಸತೀಶ್, ಪರಶುರಾಮ್, ಬಾಬು ಪ್ರಸಾದ್, ಗುರುಮೂರ್ತಿ ರೆಡ್ಡಿ, ಪ್ರತಾಪ್ ಇದ್ದರು.
ರಿಯಲ್ ಎಸ್ಟೇಟ್ನಿಂದ ಎಲ್ಲವೂ ಸರ್ವನಾಶ : ಮೂಲತಃ ಮುತ್ತನಲ್ಲೂರು ಗ್ರಾಮದಲ್ಲಿ ಜನಿಸಿದ ನನಗೆ ಭೂಸ್ವಾಧಿನವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಬೆಂಗಳೂರು ನಗರ ಎಂಬ ಅಕ್ಟೋಪಸ್ ಸಣ್ಣಸಣ್ಣ ಗ್ರಾಮಗಳನ್ನು ತಿಂದು ತೇಗುತ್ತಿದೆ, ಮುತ್ತನಲ್ಲೂರು ಗ್ರಾಮದ ಅಮಾನಿಕೆರೆಗೆ ನೂರಕ್ಕೂ ಹೆಚ್ಚು ಕೆರೆಗಳ ನೀರು ಹರಿದು ಬರುತ್ತಿತ್ತು. ಆದರೆ ಆನೇಕಲ್ ತಾಲೂಕಿನಲ್ಲಿ ಕೈಗಾರಿಕೆಗಳು ಪ್ರಾರಂಭವಾದ ನಂತರ ಕೆರೆಗಳಲ್ಲಿನ ನೀರು ಕಲುಷಿತವಾಗಿ ವಿಷಯವಾಗಿ ಹರಿಯುತ್ತಿದೆ. ಈ ಕುರಿತು ಅಂದಿನ ದಿನಗಳಲ್ಲಿಯೇ ಮುತ್ತನಲ್ಲೂರು ಕೆರೆ ಉಳಿಸಲು ಸಾಕಷ್ಟು ಶ್ರಮಿಸಲಾಯಿತು. ಆದರೆ ಕೈಗಾರಿಕೋದ್ಯಮಿಗಳ ಪ್ರಭಾವದಿಂದ ಹೋರಾಟವು ಹಳ್ಳ ಹಿಡಿಯಿತು ಎಂದು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು. ನನ್ನ ಯಾನ ಕಾದಂಬರಿಯಲ್ಲಿ ಮುತ್ತನಲ್ಲೂರು ಗ್ರಾಮದ ಸ್ವರೂಪವನ್ನೇ ತಿಳಿಸಲಾಗಿದೆ. ಆದರೆ ಅಂದಿನ ಗ್ರಾಮವು ಇಂದು ಬದಲಾವಣೆಯಾಗಿದೆ ರಿಯಲ್ ಎಸ್ಟೇಟ್ ಏಜೆಂಟರಿಂದ ಎಲ್ಲವೂ ಸರ್ವನಾಶವಾಗಿದೆ ಎಂದರು.
ಪ್ರತಿಭಟನಾ ಕವಿಗೋಷ್ಠಿ : ಸಿಟಿಯಂತೆ ಸಿಟಿ ಸ್ವ್ಟ್ಿ ಸಿಟಿ ತೊಲಗಲಿ ನಮ್ಮೂರ ಬಿಟ್ಟು ಯುವ ವಕೀಲರಾದ ಚಿಕ್ಕಹಾಗಡೆ ಪುರುಷೋತ್ತಮ್, ಸರ್ಜಾಪುರ ಪ್ರಸಾದ್ಬಾಬು, ಆಶಾ ರವರು ಭೂಸ್ವಾಧಿನದ ವಿರುದ್ಧ ಪ್ರತಿಭಟಿಸಿ ಕವಿಗೋಷ್ಠಿಯಲ್ಲಿ ಕವನಗಳನ್ನು ವಾಚಿಸಲಾಯಿತು. ಕವಿಗಳಾದ ತಾ.ನಂ ಕುಮಾರಸ್ವಾಮಿ, ಜೇನುಗೂಡು ಮಹೇಶ್ ಹೋಗಿನಹಳ್ಳಿ, ಪ್ರಭಾಕರ್ ರೆಡ್ಡಿ, ಶ್ರೀವಲ್ಲಿ, ಹುಸ್ಕೂರು ಮುನಿಯಪ್ಪ, ಡಾ. ಸುನಿತಾ ರವರು ಕವಿತೆ ಹಾಗೂ ಗಾಯನದ ಮೂಲಕ ರೈತರ ಪರವಾದ ಧ್ವನಿಯೆತ್ತಿ ನಮ್ಮ ಆನೇಕಲ್ ತಾಲೂಕಿನ ಭೂಮಿ ಮತ್ತು ರೈತರ ಉಳಿಯುವಿಗಾಗಿ ಪ್ರತಿಭಟನಾ ಕವಿಗೋಷ್ಠಿ ನಡೆಸಿದರು.
ಸಾವಿರಾರು ಕುಟುಂಬಗಳು ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿವೆ. ಒಂದು ಮನೆಯಲ್ಲಿ ಒಂದು ಹಸುವಿದ್ದರೆ ಆ ಕುಟುಂಬವನ್ನೇ ಮುನ್ನಡೆಸುತ್ತಿತ್ತು. ಆದರೆ ಈ ಭಾಗದಲ್ಲಿ ಕೈಗಾರಿಕೆಗಳು ಪ್ರಾರಂಭವಾದರೆ ಜಾನುವಾರುಗಳನಾದರೂ ಸಾಕುವುದು ಎಲ್ಲಿ ? | ಶೂದ್ರ ಶ್ರೀನಿವಾಸ್ ಹಿರಿಯ ಸಾಹಿತಿ