ಜಿಲ್ಲೆ

ನನಗೂ ಒಂದು ಅವಕಾಶ ಕೊಟ್ಟು ನೋಡಿ

ತಂದೆ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ನಿಖಿಲ್​ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ. ತಾತ, ತಂದೆಯ ನೆರಳಲ್ಲಿ ರಾಜಕಾರಣ ಮಾಡುತ್ತಿದ್ದರೂ ತಮ್ಮದೆ ಅಭಿವೃದ್ಧಿ ಕನಸು ಹೊಂದಿರುವ ಅವರು, ಈ ಬಾರಿಯ ಚುನಾವಣೆಯಲ್ಲಿ ಒಂದು ಅವಕಾಶ ಕೋರಿದ್ದಾರೆ. "ವಿಜಯವಾಣಿ' ಜಿಲ್ಲಾ ವರದಿಗಾರ "ಗಂಗಾಧರ್​ ಬೈರಾಪಟ್ಟಣ' ನಡೆಸಿದ ಸಂದರ್ಶನದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಸ್ಪರ್ಧೆಗಾಗಿಯೇ ಇಷ್ಟೆಲ್ಲ ನಾಟಕ ನಡೆಯಿತು ಎಂದು ಪ್ರತಿ ಪಕ್ಷ ಹೇಳುತ್ತಿದೆಯಲ್ಲ?

* ಚನ್ನಪಟ್ಟಣ ಸೇರಿ ರಾಜ್ಯದಲ್ಲಿ ಪಕ್ಷ ಸಂಟನೆ ಮಾಡಿಕೊಂಡಿದ್ದೆ. ಚನ್ನಪಟ್ಟಣದಿಂದ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದೆ. ಪ್ರತಿ ಪಕ್ಷದವರು ಏನಾದರೂ ಹೇಳಲಿ, ನನ್ನ ಸ್ಪರ್ಧೆ ಹಿಂದಿನ ಕಾರಣ ಇಡೀ ರಾಜ್ಯದ ಜನತೆಗೆ ತಿಳಿದಿದೆ. ಚನ್ನಪಟ್ಟಣ ಕ್ಷೇತ್ರ ನನ್ನ ತಾತ, ತಂದೆಯವರಿಗೆ ರಾಜಕೀಯವಾಗಿ ಶಕ್ತಿ ತುಂಬಿದ ಕರ್ಮಭೂಮಿ. ಇಲ್ಲಿನ ಕಾರ್ಯಕರ್ತರು ತಂದೆ, ತಾತನ ಹೋರಾಟಕ್ಕೆ ಜತೆಯಾಗಿದ್ದಾರೆ. ಇಂತಹ ಕ್ಷೇತ್ರದ ಜನರ ಸೇವೆ ಮಾಡಬೇಕೆಂಬುದು ಬಹುಶಃ ದೈವ ನಿರ್ಧರಿತವಾಗಿತ್ತೇನೋ?

ನಿಮ್ಮ ತಂದೆಯವರ ಹಠ ಯೋಗೇಶ್ವರ್​ ಕಾಂಗ್ರೆಸ್​ಗೆ ಜಿಗಿಯಲು ಕಾರಣ ಅಂತಾರಲ್ಲ?

* ನಾವು ಯಾವ ಹಂತದಲ್ಲಿಯೂ ಹಠಕ್ಕೆ ಬೀಳಲಿಲ್ಲ. ಜೆಡಿಎಸ್​ನಿಂದ ಟಿಕೆಟ್​ ಕೊಡಲು ನಿರ್ಧಾರ ಮಾಡಲಾಗಿತ್ತು. ಆದರೆ ಅವರು, ಬೇಡ ಎಂದರು. ನಂತರ ಬಿಜೆಪಿಯಿಂದಲೇ ಟಿಕೆಟ್​ ನೀಡಲು ತೀರ್ಮಾನವಾಗಿತ್ತು. ಅಷ್ಟರಲ್ಲಿ ಅವರ ಬಳಿಗೆ ವಿವಿಧ ಪಕ್ಷಗಳ ಬಿಫಾರಂರ್ಗಳು ಬಂದಿದ್ದವು. ಅವರಿಗೆ ಕಾಂಗ್ರೆಸ್​ ಬಗ್ಗೆಯೂ ನಂಬಿಕೆ ಇರಲಿಲ್ಲ. ಆದರೂ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್​ ಸೇರಿದರು.

ಸ್ಪರ್ಧಿಸಲ್ಲ ಎಂದು ನಂತರ ಒಪ್ಪಲು ಕಾರಣವೇನು?

* ಬದಲಾದ ಕಾಲಟ್ಟದಲ್ಲಿ ಕಾರ್ಯಕರ್ತರ ಒತ್ತಡದಿಂದ ನನ್ನ ಸ್ಪರ್ಧೆ ಆಗಿದೆ. ಇದೊಂದು ಆಕಸ್ಮಿಕ ಬೆಳವಣಿಗೆ. ನಾವು ಯಾರನ್ನು ಕಣಕ್ಕೆ ಇಳಿಸಬೇಕು ಎಂದುಕೊಂಡಿದ್ದೆವೋ ಅವರೇ ನಮ್ಮ ವಿರೋಧಿ ಪಕ್ಷಕ್ಕೆ ಹೋದಾಗ ಅನಿವಾರ್ಯವಾಗಿ, ಮೈತ್ರಿ ಪಕ್ಷದ ನಾಯಕರು ಹಾಗೂ ಸ್ಥಳಿಯ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದೇನೆ.

ಈ ಚುನಾವಣೆ ನಿಮ್ಮ ರಾಜಕೀಯ ಭವಿಷ್ಯ ನಿರ್ಧರಿಸುತ್ತಾ?

* ನನ್ನ ರಾಜಕೀಯ ಭವಿಷ್ಯ ನಿರ್ಧಾರಕ್ಕಾಗಿ ಮಾಡಿದ ಸ್ಫರ್ಧೆಯಲ್ಲ. ಕಾರ್ಯಕರ್ತರ ಭಾವನೆಗೆ ಬೆಲೆ ಕೊಟ್ಟು ಕಣಕ್ಕೆ ಇಳಿದ ಚುನಾವಣೆ. ಕಾರ್ಯಕರ್ತರು ಜೆಡಿಎಸ್​ನ ಅಸ್ತಿತ್ವ ಹಾಗೂ ಭವಿಷ್ಯವನ್ನು ನಿರ್ಧರಿಸುವರು.

ಬಿಜೆಪಿ ನಿಮ್ಮ ಜತೆಗಿರುವುದು ಅನುಕೂಲವೇ?

* ಬಿಜೆಪಿ, ಜನತಾ ದಳ ಸ್ಥಾಪನೆಯಾಗಿರುವುದೇ ಕಾಂಗ್ರೆಸ್​ ವಿರುದ್ಧದ ಹೋರಾಟದಿಂದ. ಸಾಂಪ್ರದಾಯಿಕ ಮತಗಳಿರುವ ಕ್ಷೇತ್ರವು ಜೆಡಿಎಸ್​ನ ಭದ್ರಕೋಟೆಯಾಗಿದೆ. ಬಿಜೆಪಿ ತನ್ನದೆ ಮತ ಬ್ಯಾಂಕ್​ ಹೊಂದಿದೆ. ಎರಡೂ ಪಕ್ಷಗಳ ನಾಯಕರು ನನ್ನ ಗೆಲುವಿಗೆ ಪಣ ತೊಟ್ಟು ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿ ನಮ್ಮ ಶಕ್ತಿ ಹೆಚ್ಚಿಸಿದೆ.

ಈ ಬಾರಿ ಮುಸ್ಲಿಂ ಮತಗಳು ಲಭಿಸುತ್ತಾ?

* ಖಂಡಿತವಾಗಿ. ಇದರಲ್ಲಿ ಎರಡು ಮಾತಿಲ್ಲ. ಹಿಂದಿನ ಚುನಾವಣೆಗಳಲ್ಲೂ ಈ ಸಮುದಾಯ ಬೆಂಬಲವಾಗಿ ನಿಂತಿದೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಡುವ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು ದೇವೇಗೌಡರು. ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಕೋಮುಸೌಹಾರ್ದ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ನಮ್ಮ ಜತೆಗಿದ್ದಾರೆ. ದಲಿತ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೂ ಶ್ರಮಿಸಿದ್ದಾರೆ. ಚನ್ನಪಟ್ಟಣದಲ್ಲಿ ತಂದೆಯವರ ಎರಡು ಬಾರಿ ಗೆಲುವಿಗೆ ಅವರ ಕಾಣಿಕೆಯೂ ಇದೆ. ಈ ಬಾರಿಯೂ ಅದು ಮುಂದುವರಿಯಲಿದೆ.

ಎದುರಾಳಿ ಕುರಿತು ನಿಮ್ಮ ಅಭಿಪ್ರಾಯವೇನು?

* ಯೋಗೇಶ್ವರ್​ ಸೇರಿ ಯಾವುದೇ ಎದುರಾಳಿ ಬಗ್ಗೆ ಲುವಾಗಿ ಮಾತನಾಡಿಲ್ಲ. ರಾಜಕೀಯದ ಅನುಭವದ ಕೊರತೆ ಇದ್ದರೂ ಎಲ್ಲರನ್ನೂ ಗೌರವಿಸುತ್ತೇನೆ. ಯೋಗೇಶ್ವರ್​ ಅವರು ಹಲವು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಸುಧೀರ್ ಅನುಭವ ಹೊಂದಿದ್ದಾರೆ. ಆದರೆ, ಅವರು ಯಾವತ್ತೂ 6 ವರ್ಷಗಳಿಗಿಂತ ಹೆಚ್ಚು ಕಾಲ ಒಂದು ಪಕ್ಷಕ್ಕೆ ನಿಷ್ಠರಾಗಿಲ್ಲ. ಪಕ್ಷ ನಿಷ್ಠೆ ಹಾಗೂ ಅಭಿವೃದ್ಧಿ ಬದ್ಧತೆ ಇಲ್ಲದವರಿಗೆ ಮತದಾರರು ಈ ಸಲ ಪಾಠ ಕಲಿಸಲಿದ್ದಾರೆ.

ಕ್ಷೇತ್ರದ ನೀರಾವರಿ ಬಗ್ಗೆ ನಿಮ್ಮ ವಾದವೇನು?

* ವಾದದ ಪ್ರಶ್ನೆಯೇ ಇಲ್ಲ, ವಾಸ್ತವವನ್ನಷ್ಟೇ ಮಾತನಾಡುತ್ತಿದ್ದೇವೆ. ತಾಲೂಕಿನ 17 ಕೆರೆಗಳನ್ನು "ನಾನೇ ತುಂಬಿಸಿದೆ' ಎನ್ನುವ ಯೋಗೇಶ್ವರ್​ ಅವರೇನಾದರೂ ಮುಖ್ಯಮಂತ್ರಿ ಅಥವಾ ನೀರಾವರಿ ಸಚಿವರಾಗಿದ್ದರೇ? ಆದರೂ, ಕೆರೆಗಳನ್ನು ತುಂಬಿಸಿದ ಭಗೀರಥ ಎಂದು ಫ್ಲೆಕ್ಸ್​ ಹಾಕಿಸಿಕೊಂಡು ಪ್ರಚಾರ ಪಡೆದರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಹಣ ಬಿಡುಗಡೆ ಮಾಡಿ ಕೆರೆಗಳನ್ನು ತುಂಬಿಸಿದರು. ದೇವೇಗೌಡರ ದೂರದೃಷ್ಟಿತ್ವದಿಂದ ಇಗ್ಗಲೂರು ಬ್ಯಾರೇಜ್​ ನಿರ್ಮಾಣವಾಗಿ ನೀರು ಹರಿಸಲು ಸಾಧ್ಯವಾಯಿತು. ಅವರು 17 ಕೆರೆಗಳಿಗೆ ನೀರು ತುಂಬಿಸಿದರು. ನಮ್ಮ ತಂದೆ 107 ಕೆರೆಗಳಿಗೆ ಇದನ್ನು ವಿಸ್ತರಿಸಿದರು. ಆದರೆ, ನಾವೆಲ್ಲೂ ಯೋಗೇಶ್ವರ್​ ಅವರಂತೆ ಪ್ರಚಾರ ಪಡೆಯಲಿಲ್ಲ.

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸೇನು?

* ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸ್ಪಷ್ಟ ಪರಿಕಲ್ಪನೆ ಹೊಂದಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರುವುದು ನನ್ನ ಗುರಿ. ನಮ್ಮ ತಂದೆಯವರ ಕಾಲದಲ್ಲಿಯೇ ರಾಮನಗರ ಜಿಲ್ಲೆಯಾಗಿದ್ದು, ಈಗ ರಾಮನಗರ & ಚನ್ನಪಟ್ಟಣ ಅವಳಿ ನಗರ ಮಾಡುವ ಜತೆಗೆ, ಚನ್ನಪಟ್ಟಣದ ಯುವಕರಿಗೆ ಉದ್ಯೋಗ ಸೃಷ್ಟಿಮಾಡುವುದು, ಜನರ ಜೀವನಮಟ್ಟ ಸುಧಾರಿಸುವುದು, ನೀರಾವರಿ, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸಿದ್ದೇನೆ. ಚನ್ನಪಟ್ಟಣ ಮಾತ್ರವಲ್ಲ ರಾಜ್ಯದ ರೈತರ ಪರವಾಗಿ ದುಡಿಯುವ ಹಂಬಲವಿದೆ.

ನಿಮಗೆ ಏಕೆ ಮತ ಹಾಕಬೇಕು?

* ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಕುತಂತ್ರಕ್ಕೆ ಬಲಿಯಾಗಿದ್ದೇನೆ. ಇದು ಮೂರನೇ ಸ್ಪರ್ಧೆ. ಈ ಕ್ಷೇತ್ರದಲ್ಲಿ 25 ವರ್ಷ ಯೋಗೇಶ್ವರ್​ ಅವರಿಗೆ ಹಲವು ಬಾರಿ ಅವಕಾಶ ನೀಡಿದ್ದಾರೆ. ಇನ್ನೂ ಮೂರೂವರೆ ವರ್ಷ ಕಾಲಾವಕಾಶ ಇದೆ. ಈ ಅವಧಿಯಲ್ಲಿ ಜನರು ನೀಡುವ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ವಿಲನಾದರೆ, 2028ರ ಚುನಾವಣೆಯಲ್ಲಿ ಮತದಾರರ ನಿರ್ಧಾರಕ್ಕೆ ಬದ್ಧ. ಅಭಿವೃದ್ಧಿಗಾಗಿ ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದೆ.