ವಿಜಯವಾಣಿ ಸುದ್ದಿಜಾಲ ಧಾರವಾಡ
ಆರೋಗ್ಯಯುತ ಜೀವನ ನಡೆಸಲು ಪ್ರತಿ ಮನೆ ಮನೆಗಳಿಂದಲೇ ಸ್ವಚ್ಛತೆ ಕಾರ್ಯ ನಡೆಯಬೇಕು ಎಂದು ಆರೋಗ್ಯ ಇಲಾಖೆಯ ಸುಮಂಗಲಾ ಬಾಬಜಿ ಹೇಳಿದರು.
ನಗರದ ಸಾಧನಕೇರಿ ಕಾಳೆ ಪ್ಲಾಟ್ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಡೆಂಘೆ ಜಾಗೃತಿ, ಜನಸಂಖ್ಯೆ ನಿಯಂತ್ರಣ ಅರಿವು ಮತ್ತು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಮಾಸಾಚರಣೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಡೆಂಘೆ ರೋಗ ನಿಯಂತ್ರಣದಲ್ಲಿರಲಿದೆ. ಸ್ವಚ್ಛ ನೀರಿನಲ್ಲೇ ಸೊಳ್ಳೆಗಳು ಹುಟ್ಟಿಕೊಂಡು ಡೆಂಘೆಗೆ ಕಾರಣವಾಗಲಿವೆ. ಮಹಿಳೆಯರು ಮನೆ ಹಾಗೂ ಮನೆ ಹೊರಗಡೆ ತುಂಬಿ ಇಡುವ ನೀರಿನ ಪಾತ್ರೆಗಳನ್ನು ಕಡ್ಡಾಯವಾಗಿ ಮುಚ್ಚಿಡಬೇಕು. ಮನೆ ಮೇಲ್ಛಾವಣಿಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.
ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ಮಾತನಾಡಿ, ವಾರ್ಡ್ನಲ್ಲಿ ಸ್ವಚ್ಛತೆ ಸಮಸ್ಯೆಗಳಿದ್ದರೆ ಮಾಹಿತಿ ನೀಡಿ. ಕೂಡಲೇ ಸ್ವಚ್ಛತೆ ಕಾರ್ಯ ನಡೆಸಿ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಅಂಗನವಾಡಿ ವಲಯ ಮೇಲ್ವಿಚಾರಕ ಬನಶಂಕರಿ ಮೀಸೆ ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು. ಸಂಘಟಕ ಮಾರ್ತಾಂಡಪ್ಪ ಕತ್ತಿ, ಜಯಶ್ರೀ ಗೌಳಿ ಮಾತನಾಡಿದರು.
ಕಾಳೆ ಪ್ಲಾಟ್ ಅಂಗನವಾಡಿ ಕಾರ್ಯಕರ್ತರಾದ ವಿಜಯಲಕ್ಷ್ಮೀ ಬಾಲೇದಮಠ, ಆರೀಫಾ ಕಲಾಸಿ, ಆರತಿ ನಾಡಗೌಡರ, ಸಂಗೀತಾ ಹಿರೇಮಠ, ಆಶಾ ಕಾರ್ಯಕರ್ತರು, ಕಾಳೆ ಪ್ಲಾಟ್, ಹುಬ್ಳೀಕರ ಪ್ಲಾಟ್ ನಿವಾಸಿಗಳು, ಇತರರು ಇದ್ದರು.