ಯಲ್ಲಾಪುರ: ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಿಂದ ಮುಂದೂಡಲ್ಪಟ್ಟಿದ್ದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಗುರುವಾರ ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮದೇವಿ ಕಳೆದ ಜಾತ್ರೆಯ ಖರ್ಚು-ವೆಚ್ಚದ ಅಧಿಕೃತ ದಾಖಲೆ ಸಭೆಗೆ ಒಪ್ಪಿಸಿದ ನಂತರವೇ ಸಭೆ ಮುಂದುವರಿಸಬೇಕು ಎಂದು ಪಪಂ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ ಆಗ್ರಹಿಸಿದರು. ಜಾತ್ರೆಯ ಲೆಕ್ಕದಲ್ಲಿ ಅವ್ಯವಹಾರ ಆಗಿದೆ. ಜಾತ್ರೆ ಮುಗಿದು ಎರಡು ವರ್ಷಗಳು ಕಳೆದರೂ ಲೆಕ್ಕದ ಮಾಹಿತಿ ನೀಡಿಲ್ಲ. ಹಿಂದಿನ ಮುಖ್ಯಾಧಿಕಾರಿ ಲೆಕ್ಕಪತ್ರ ಒಪ್ಪಿಸದೇ ವರ್ಗಾವಣೆಗೊಂಡಿದ್ದಾರೆ. ಲೆಕ್ಕಪತ್ರದ ಮಾಹಿತಿ ನೀಡದೇ ಜಾತ್ರೆಯ ಖರ್ಚು- ವೆಚ್ಚಗಳಿಗೆ ಅನುಮೋದನೆ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಮುಖ್ಯಾಧಿಕಾರಿ ಸುನೀಲ ಗಾವಡೆ, ಒಂದು ವಾರ ಕಾಲಾವಕಾಶ ಕೊಡಬೇಕು. ಕಡತ ಪರಿಶೀಲನೆ ಮಾಡಿ, ತಪ್ಪು ಕಂಡುಬಂದಲ್ಲಿ ಅಂತಹವರಿಗೆ ನೋಟಿಸ್ ನೀಡಲಾಗುವುದು. ಜ. 23ರಂದು ಸದಸ್ಯರಿಗೆ ಲೆಕ್ಕಪತ್ರದ ಮಾಹಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮೂಲಸೌಲಭ್ಯಗಳ ವ್ಯವಸ್ಥೆ ಆಗುವ ಮುನ್ನವೇ ಲೇಔಟ್ ಹಸ್ತಾಂತರ ಮಾಡಿಕೊಂಡ ವಿಷಯದ ಬಗ್ಗೆ ಸದಸ್ಯರ ಪ್ರಶ್ನಿಸಿದರು. ಧಾತ್ರಿ ಲೇ ಔಟ್‌ನಲ್ಲಿ ಒಂದು ವಾರದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ಪ್ರತಿಭಟನಾನಿರತ ಮಂಜುನಾಥ ಹೆಗಡೆ ಅವರಿಗೆ ಭರವಸೆ ನೀಡಿ, 15 ದಿನ ಕಳೆದರೂ ವ್ಯವಸ್ಥೆ ಮಾಡಿಲ್ಲ ಎಂದು ಸದಸ್ಯ ಸತೀಶ ನಾಯ್ಕ ಪ್ರಶ್ನಿಸಿದರು.
ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಲೇ ಔಟ್ ಡೆವಲಪರ್‌ಗೆ ನೋಟಿಸ್ ಸಿದ್ಧಪಡಿಸಲಾಗಿದೆ. ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಪಟ್ಟಣದ ಎಲ್ಲಾ ಲೇ ಔಟ್‌ಗಳಿಗೆ ಒಮ್ಮೆ ಭೇಟಿ ನೀಡಿ ಮೂಲಸೌಕರ್ಯಗಳ ವ್ಯವಸ್ಥೆ ಪರಿಶೀಲಿಸಬೇಕೆಂದು ಸದಸ್ಯ ಸೋಮು ನಾಯ್ಕ ಆಗ್ರಹಿಸಿದರು. ಇದಕ್ಕೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸದಸ್ಯರ ಹೆಚ್ಚಿನ ಪ್ರಶ್ನೆಗಳಿಗೆ ಮುಖ್ಯಾಧಿಕಾರಿ, ನಿಯಮಾವಳಿಗಳನ್ನು ಹೇಳುವುದು ಬಿಟ್ಟರೆ, ಖಚಿತವಾಗಿ ಯಾವುದೇ ನಿರ್ಣಯ ಹೇಳದೇ ಜಾರಿಕೊಂಡರು. ವಿದ್ಯುತ್ ವತ್ಯಯದ ಬಗ್ಗೆ ಹೆಸ್ಕಾಂ ಮೊದಲೇ ಮಾಹಿತಿ ನೀಡಿದ್ದರೂ, ಸಭೆಗೆ ಬೆಳಕಿನ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೇ ಇರುವ ಕಾರಣ ಕತ್ತಲೆಯಲ್ಲೇ ಸಭೆ ನಡೆಯಿತು.
ಮೌನಕ್ಕೆ ಶರಣಾದ ಅಧ್ಯಕ್ಷ-ಉಪಾಧ್ಯಕ್ಷರು: ವೇದಿಕೆಯಲ್ಲಿದ್ದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಮೌನಕ್ಕೆ ಜಾರಿದ್ದರು. ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ. ಪ್ರತಿ ವಿಷಯದಲ್ಲೂ ಸದಸ್ಯರಾದ ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಮಾತುಗಳೇ ಜೋರಾಗಿದ್ದವು. ಇಡೀ ಸಭೆಯನ್ನು ಅವರಿಬ್ಬರೇ ನಿಯಂತ್ರಿಸುತ್ತಿದ್ದರು. ಸದಸ್ಯರಾದ ಸೋಮು ನಾಯ್ಕ, ರಾಜು ನಾಯ್ಕ, ಸುನಂದಾ ದಾಸ್ ಕೆಲ ವಿಷಯಗಳಲ್ಲಿ ಮಾತನಾಡಿದರು. ಉಳಿದ ಸದಸ್ಯರು ಮೌನ ವಹಿಸಿದ್ದರು.