ಕೆ.ಎಂ.ದೊಡ್ಡಿ: ಮಕ್ಕಳಿಂದ ಒತ್ತಾಯದಿಂದ ದುಡಿಸಿಕೊಂಡರೆ ಅವರ ಭವಿಷ್ಯ ಕಮರಿ ಹೋಗುತ್ತದೆ ಎಂದು ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್‌ಲೆನ್ಸ್ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ ತಿಳಿಸಿದರು.
ಇಲ್ಲಿನ ಭಾರತೀ ಎಕ್ಸ್‌ಲೆನ್ಸ್ ಮತ್ತು ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್‌ಲೆನ್ಸ್ ವತಿಯಿಂದ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಬಾಲ ಕಾರ್ಮಿಕರಾಗದಂತೆ ತಡೆಯಲು ಪ್ರತಿಯೊಬ್ಬರು ಕಾರ್ಯೋನ್ಮುಖರಾಗಬೇಕು ಎಂದರು.
ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುವ ಹಾಗೆಯೇ ಮಕ್ಕಳಿಂದ ಭಿಕ್ಷಾಟನೆ ಸಹ ಅಪಾಯಕಾರಿ. ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೇರೆಪಿಸಬೇಕು ಎಂದು ಹೇಳಿದರು.
ಈ ವೇಳೆ ವಿದ್ಯಾರ್ಥಿಗಳು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿದರು. ಶಿಕ್ಷಕರಾದ ಗಂಗಯ್ಯ, ಪುಟ್ಟಸ್ವಾಮಿ, ಇಂದ್ರಾಣಿ, ಗಾಯತ್ರಿ, ಪರಮೇಶ್, ಶಂಕರ್, ಕಾವ್ಯಾ, ಮಂಗಳಗೌರಿ ಮತ್ತಿತರಿದ್ದರು.