ಗುಳೇದಗುಡ್ಡ: ಕಾಯಕ ವರ್ಗದವರು ಗಳಿಕೆ, ಬಳಿಕೆ ಹಾಗೂ ಉಳಿಕೆ ಸೂತ್ರ ಅನುಸರಿಸಿದಾಗ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ಚಿತ್ರದುರ್ಗ- ಬಾಗಲಕೋಟೆ ಭೋವಿ ವಡ್ಡರ ಗುರುಪೀಠದ ಇಮ್ಮುಡಿ ಸಿದ್ಧರಾಮೇಶ್ವರ ಸ್ವಾಮಿಗಳು ಹೇಳಿದರು.
ತಾಲೂಕು ಭೋವಿ (ವಡ್ಡರ) ಸಮಾಜದ ವತಿಯಿಂದ ಮಂಗಳವಾರ ನಗರದ ಕರನಂದಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ 853ನೇ ಜಯಂತ್ಯುತ್ಸವ ಹಾಗೂ ತಾಲೂಕು ಭೋವಿ ವಡ್ಡರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಯಾಂತ್ರಿಕ ಯುಗದಲ್ಲಿ ಯಂತ್ರಗಳು ಮಾನವನಿಗೆ ಪ್ರತಿಸ್ಪರ್ಧಿಯಾಗುತ್ತಿವೆ. ಇದು ಕಾಯಕ ಜೀವಿಗಳ ಕೆಲಸ ಕಸಿದುಕೊಳ್ಳುತ್ತಿದೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವಕಾಶಗಳನ್ನು ಸೃಷ್ಠಿಸಿಕೊಳ್ಳಬೇಕು ಎಂದರು.
ಶಿಕಾರಿಪುರದ ಚನ್ನಬಸವ ಶ್ರೀಗಳು, ಸ್ಥಳೀಯ ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ತಾಲೂಕು ಭೋವಿ ಸಮಾಜದ ಅಧ್ಯಕ್ಷ ಬಸವರಾಜ ಬಂಡಿವಡ್ಡರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಸಂಜಯ ಬರಗುಂಡಿ, ಸಮಾಜದ ಕಾರ್ಯದರ್ಶಿ ಯಮನಪ್ಪ ವಡ್ಡರ, ಹಿರಿಯರಾದ ಹನಮಂತ ಗಾಜಿ, ಬುದ್ಧಪ್ಪ ಕೆಂಪನ್ನವರ, ಗುರುಪ್ಪ ಗಾಜಿ, ಯಮನಪ್ಪ ಧನ್ನೂರ, ಈರಣ್ಣ ಬಂಡಿವಡ್ಡರ, ಬಸವರಾಜ ಎಚ್. ಬಂಡಿವಡ್ಡರ, ರಾಜು ಸಂಗಮ, ದುರ್ಗೇಶ ಅಮರಾವತಿ, ನಾಗೇಶ ಧನ್ನೂರ, ಆರತಿ ಧನ್ನೂರ, ಶಶಿಕಲಾ ಕಲ್ಲಕುಟುಕರ, ಸವಿತಾ ಕಲ್ಲಕುಟುಕರ ಮತ್ತಿತರರು ಇದ್ದರು.
ಸಿದ್ಧರಾಮೇಶ್ವರ ಭಾವಚಿತ್ರದೊಂದಿಗೆ ಇಮ್ಮುಡಿ ಸಿದ್ಧರಾಮೇಶ್ವರ ಶ್ರೀಗಳ ಮೆರವಣಿಗೆ ಹೊಸ ಅಂಬಾಭವಾನಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಕರನಂದಿ ರಂಗಮಂದಿರ ತಲುಪಿತು.