ಮದ್ದೂರು: ಸಮಾಜದ ಎಲ್ಲ ರಂಗಗಳಲ್ಲೂ ತಮ್ಮ ಅಪ್ರತಿಮವಾದ ಸಾಧನೆಗಳನ್ನ ತೋರುತ್ತಿರುವ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ ಎಂದು ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಹೇಳಿದರು.
ಪಟ್ಟಣದ ಕಮಲ ನೆಹರು ಬಾಲಿಕಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮಾತನಾಡಿ, ಜೀವನದಲ್ಲಿ ಶಿಕ್ಷಣವು ಬಹುಮುಖ್ಯವಾಗಿದ್ದು ಸಮಾಜದ ಯಾವುದೇ ಹೆಣ್ಣು ಮಗು ಮೊದಲು ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕೆಂದರು.
ಇತ್ತೀಚಿನ ದಿನಗಳಲ್ಲಿ ಪಾಲಕರು ತಮ್ಮ ಜವಾಬ್ದಾರಿಗಳನ್ನು ಕಳೆದುಕೊಳ್ಳಬೇಕು ಎಂಬ ಮನೋಭಾವದಿಂದ ಬಾಲ್ಯಾವಸ್ಥೆಯಲ್ಲಿಯೇ ಹೆಣ್ಣಮಕ್ಕಳಿಗೆ ಮದುವೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ ಎಂದ ಅವರು ಈ ಬಗ್ಗೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾನಸಿಕ ಒತ್ತಡ ನೀಡದೆ ಅವರ ಆರೋಗ್ಯ ಮತ್ತು ದೈಹಿಕ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಪಾಲಕರು ಸ್ಪಂದಿಸುವ ಮೂಲಕ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತ ವಾತಾವರಣವನ್ನು ಕಲ್ಪಿಸಿ ಕೊಡಬೇಕೆಂದು ಹೇಳಿದ ಅವರು, ವಿದ್ಯಾರ್ಥಿಗಳು ಕೂಡ ಉತ್ತಮ ಪೋಷಕಾಂಶಗಳಿರುವಂತಹ ಆಹಾರಗಳನ್ನು ಸೇವಿಸುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಸಮತೋಲ ಕಾಪಾಡಿಕೊಂಡು ಯಾವುದೇ ಆತಂಕಗೊಳಗಾಗದೆ ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದು ಶಾಲೆ ಮತ್ತೆ ಪಾಲಕರಿಗೆ ಒಳ್ಳೆಯ ಹೆಸರು ತರಬೇಕೆಂದು ಕಿವಿಮಾತು ಹೇಳಿದರು.
ಶಿಕ್ಷಣ ಸಂಯೋಜಕರಾದ ಸುಬ್ರಹ್ಮಣ್ಯ ,ಲೋಕೇಶ್, ಮುಖ್ಯಶಿಕ್ಷಕರಾದ ಎನ್.ಕೃಷ್ಣ , ಎಂ.ಟಿ.ಚಂದ್ರಶೇಖರ್, ಶಿಕ್ಷಕರಾದ ಕೆಂಚೇಗೌಡ ,ಅಶ್ವಿನಿ, ಕೀರ್ತಿಕುಮಾರಿ, ನಂದಿನಿ ಇದ್ದರು.