ಶಿವಮೊಗ್ಗದಲ್ಲಿ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಆರಂಭಕ್ಕೆ ಸಹಕಾರ ನೀಡುವ ಸಂಬಂಧ ಬಿ.ವೈ.ರಾಘವೇಂದ್ರ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು. 
ಜಿಲ್ಲೆ

ಸಂಶೋಧನಾ ಕೇಂದ್ರಕ್ಕೆ ಆರ್ಥಿಕ ನೆರವು ನೀಡಿ: ಕೇಂದ್ರ ಸಚಿವರಿಗೆ ಬಿವೈಆರ್ ಮನವಿ

ಶಿವಮೊಗ್ಗ: ದೆಹಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ಭೇಟಿಯಾದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರಧಾನ ಬೆಳೆಯಾದ ಮೆಕ್ಕೆಜೋಳಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಅಗತ್ಯವಾದ ಆರ್ಥಿಕ ನೆರವು ಮಂಜೂರು ಮಾಡುವಂತೆ ಮನವಿ ಮಾಡಿದರು.

ಮೆಕ್ಕೆಜೋಳ ಬೆಳೆ ಪ್ರದೇಶ ರಾಜ್ಯದಲ್ಲಿ ಹೆಚ್ಚುತ್ತಿದ್ದರೂ, ಇಳುವರಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ. ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನಾ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ. ಐಸಿಎಆರ್ ವಿಜ್ಞಾನಿಗಳು ಶಿವಮೊಗ್ಗದಲ್ಲಿ ಮೆಕ್ಕೆಜೋಳ ಸಂಶೋಧನಾ ಕೇಂದ್ರಕ್ಕೆ ಸ್ಥಳ ಪರಿಶೀಲನೆ ನಡೆಸಿ ಕೇಂದ್ರ ತೆರೆಯಲು ಶಿಫಾರಸ್ಸು ಮಾಡಿದೆ ಎಂಬ ಅಂಶವನ್ನು ವಿತ್ತ ಸಚಿವರ ಗಮನಕ್ಕೆ ತಂದರು.
ಸಂಶೋಧನಾ ಕೇಂದ್ರ ಆರಂಭಕ್ಕೆ ಸುಮಾರು 5 ಕೋಟಿ ರೂ. ಅನುದಾನದ ಅಗತ್ಯವಿದೆ. ಮೆಕ್ಕೆಜೋಳದ ಸಂಶೋಧನಾ ಪ್ರಾದೇಶಿಕ ಕೇಂದ್ರವು ಉತ್ಪಾದನೆಯಲ್ಲಿ ನವೀನ ಸಂಶೋಧನೆ ಮೂಲಕ ಸುಧಾರಣೆಯನ್ನು ತ್ವರಿತಗೊಳಿಸಲು ಸಹಕಾರಿಯಾಗುತ್ತದೆ. ರಾಜ್ಯದ ರೈತರಿಗೆ ಇದರಿಂದ ದೊಡ್ಡ ಮಟ್ಟದ ಪ್ರಯೋಜನವಾಗಲಿದೆ ಎಂದು ಮನದಟ್ಟು ಮಾಡಿದರು.
ಭದ್ರಾವತಿಯ ವಿಐಎಸ್‌ಎಲ್ ಮರು ಆರಂಭಕ್ಕೆ ಅಗತ್ಯ ಕ್ರಮ ಕೈಗೊಂಡ ವಿತ್ತ ಸಚಿವರನ್ನು ಇದೇ ಸಂದರ್ಭದಲ್ಲಿ ಬಿವೈಆರ್ ಅಭಿನಂದಿಸಿದರು.