ಜಿಲ್ಲೆ

ಭೋವಿ ಸಮುದಾಯಕ್ಕೆ ರಕ್ಷಣೆ ನೀಡಿ, ಮಹಾಸಭಾ ಅಧ್ಯಕ್ಷ ಆರ್. ಮುನಿರಾಜು ಆಗ್ರಹ

Dharwada - Basavaraj Idli

ಹುಬ್ಬಳ್ಳಿ: ರಾಜ್ಯದಲ್ಲಿ ಭೋವಿ ವಡ್ಡರ ಸಮುದಾಯವು ಕಡೆಗಣಿಸಲ್ಪಟ್ಟಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಭೋವಿ ವಡ್ಡರ ಮಹಾಸಭಾ ಅಧ್ಯಕ್ಷ ಆರ್. ಮುನಿರಾಜು ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಯೊಂದರಲ್ಲಿ ಇತ್ತೀಚೆಗೆ ವಡ್ಡರ ಓಣಿಯಲ್ಲಿ ಮೇಲ್ಜಾತಿಯ ಕೆಲವರು ದೌರ್ಜನ್ಯ ನಡೆಸಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕು, ಮುಂದೆ ರಾಜ್ಯದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಸಮುದಾಯದ ಜನರಿಗೆ ರಕ್ಷಣೆ ನೀಡಬೇಕು ಎಂದರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎಲ್ಲಮ್ಮ ದೇವಸ್ಥಾನ ಹತ್ತಿರದ ಕುಲದೇವರಾದ ಸಿದ್ದರಾಮೇಶ್ವರ ದೇವಸ್ಥಾನ ದ್ವಂಸ ಮಾಡಲಾಗಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳಬೇಕು, ದೇವಸ್ಥಾನ ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಸಂಗೊಳ್ಳಿ ರಾಯಣ್ಣನಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದ ಶಬ್ಧವೇದಿ ವಡ್ಡರ ಯಲ್ಲಣ್ಣನ ಪ್ರತಿಮೆಯನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣ ಬಳಿ ಪ್ರತಿಷ್ಠಾಪಿಸಬೇಕು. ಸಮಾಜದ ಜನರಿಗಾಗಿ ಸಮುದಾಯ ಭವನ ನಿರ್ಮಿಸಲು ನಗರದಲ್ಲಿ ಸಿಎ ಜಮೀನು ನೀಡಬೇಕು ಎಂದರು.

ಒಳಮೀಸಲಾತಿಗೆ ಸಮುದಾಯದ ವಿರೋಧ ಇದೆ. ಇದರಿಂದ ಸಮಾಜದ ಜನರಿಗೆ ಅನ್ಯಾಯವಾಗಲಿದೆ. ಸಮುದಾಯದ ಮಕ್ಕಳು ಹಾಗೂ ಯುವಕರು ಉದ್ಯೋಗದಿಂದ ವಂಚಿತರಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾಸಭಾ ಯುವ ಘಟಕದ ಅಧ್ಯಕ್ಷ ವೈ. ಶಂಕರ ಮಾತನಾಡಿ, ರಾಜ್ಯದಲ್ಲಿ ಸಮುದಾಯದ 50 ಲಕ್ಷ ಜನಸಂಖ್ಯೆ ಇದೆ. ಆದರೆ, ಸರ್ಕಾರದಿಂದ ಸಮರ್ಪಕವಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಸಮುದಾಯದ ಜನರ ಹಕ್ಕಿಗಾಗಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಸಂಘಟನೆಯ ಯಲ್ಲಪ್ಪಾ ನಿಲೋಗಲ್ಲ, ವಿ. ಶಂಕರ, ಬಾಬು ಭೋಜಗಾರ, ಪಂಪಣ್ಣ ಐ.ಎ., ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಾ ಭೋಜಗಾರ ಇದ್ದರು.