ಕೂಡ್ಲಿಗಿಯ ಜ್ಞಾನ ಭಾರತಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಬುಧವಾರ ಉದ್ಘಾಟಿಸಿದರು. 
ಜಿಲ್ಲೆ

ರಾಜ್ಯದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ

ಕೂಡ್ಲಿಗಿ: ಗಡಿ ಭಾಗಗಳಲ್ಲಿ ಅನ್ಯ ಭಾಷಿಕರು ಕನ್ನಡಿಗರ ಮೇಲೆ ದಾಳಿ ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡಿದರೂ ನ್ಯಾಯ ಸಿಗುತ್ತಿಲ್ಲ ಎಂದು ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಯುವ ಪೀಳಿಗೆಗೆ ಸಾಹಿತ್ಯ ಮತ್ತು ಸಂಸ್ಕೃತಿ ಪರಿಚಯ ಮಾಡಲಾಗುತ್ತಿದೆ.

ಪಟ್ಟಣದ ಜ್ಞಾನ ಭಾರತಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಬಿಟ್ಟು ಬೇರೆ ರಾಜ್ಯದವರಿಗೆ ಉದ್ಯೋಗ ನೀಡಲಾಗುತ್ತಿದೆ. ಇದನ್ನು ತಡೆಯಲು ಯಾರೂ ಮುಂದಾಗುತ್ತಿಲ್ಲ. ನಾವು ಹೋರಾಟ ಮಾಡಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು. ಯುವ ಪೀಳಿಗೆಗೆ ಸಾಹಿತ್ಯ ಮತ್ತು ಸಂಸ್ಕೃತಿ ಪರಿಚಯ ಮಾಡಲಾಗುತ್ತಿದೆ. ಸಂಸ್ಥೆ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗಿದ್ದು, ನನ್ನ ಮಗಳು ಶ್ರೀಮತಿ ರಶ್ಮಿ ಸ್ಮರಣಾರ್ಥ ದತ್ತಿ ಸ್ಥಾಪನೆ ಮಾಡಲಾಗುವುದು ಎಂದರು.

ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅಪಾರ

ಕೃಷಿಕ ಪ್ರಶಸ್ತಿ ಪುರಸ್ಕೃತ ಗೌಡ್ರ ನಾಗರಾಜ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅಪಾರವಾಗಿದೆ. ಕೃಷಿ ಮೊದಲು ಕೌಟುಂಬಿಕವಾಗಿತ್ತು. ಈಗ ವ್ಯವಹಾರಿಕವಾಗಿದೆ. ಸಾಂಬರ್ ಪದಾರ್ಥ ಉತ್ಪಾದನೆಯಿಂದ ಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಹಲವು ಮರಗಳು ಔಷಧ ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಾವಿರಾರು ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ. ವೈಜ್ಞಾನಿಕ ವಿಧಾನದ ಕೃಷಿಯಲ್ಲಿ ಉತ್ಪಾದನೆ ಹೆಚ್ಚಾಗಿದ್ದು, ರಸಗೊಬ್ಬರ ಹಾಗೂ ರಾಸಾಯನಿಕ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ರಾಸಾಯನಿಕ ಬಳಕೆಯಿಂದ ಮುಂದಿನ ಪೀಳಿಗೆಗೆ ಭೂಮಿ ಉಳಿಸಲು ಸಾಧ್ಯವಿಲ್ಲ ಎಂದರು.

ದಾಸ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯ

ಶಿಕ್ಷಕ ಎ.ಎಚ್.ಎಂ.ಶಂಭುಲಿಂಗಸ್ವಾಮಿ ಮಾತನಾಡಿ, ದಾಸ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದ್ದು, ಕೆಲವರು ಅಪಾರ ಸಂಪತ್ತು ಧಿಕ್ಕರಿಸಿ ಸಾಹಿತಿಗಳಾಗಿದ್ದಾರೆ. ಹವ್ಯಾಸದಿಂದ ಸಾಹಿತ್ಯ ರಚನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಂಜು ಮಯೂರ, ಕಸಾಪ ಗೌರವ ಕಾರ್ಯದರ್ಶಿ ನಂದಿ ಬಸವರಾಜ, ಸಹ ಕಾರ್ಯದರ್ಶಿ ಸೋಮಶೇಖರ ಆರಾಧ್ಯ, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ, ಪ್ರಮುಖರಾದ ಎಲೆ ನಾಗರಾಜ, ಶಂಕರ,ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.