ಜಿಲ್ಲೆ

ಕನ್ನಡಿಗರಿಗೆ ಉದ್ಯೋಗ ನೀಡಿ ಪರಭಾಷೆ ವಲಸೆ ತಪ್ಪಿಸಿ

reportermys


ಮೈಸೂರು: ನ್ಯಾಯಾಲಯಗಳಲ್ಲಿ ಕನ್ನಡ ಕಡ್ಡಾಯ ಆಗಬೇಕು. ಕನ್ನಡಿಗರಿಗೆ ಉದ್ಯೋಗ ನೀಡಿ ಪರಭಾಷೆಯವರ ವಲಸೆ ತಪ್ಪಿಸಬೇಕೆಂದು ಒತ್ತಾಯಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹಾರ್ಡಿಂಜ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.


ಕರ್ನಾಟಕ ರಾಜ್ಯ ಉದಯವಾಗಿ 67 ವರ್ಷವಾಗಿದೆ. ಆದರೆ, ಕನ್ನಡಿಗರ ಪರಿಸ್ಥಿತಿ ಸುಧಾರಿಸಿಲ್ಲ. ಕನ್ನಡ ಮಾಧ್ಯಮ ಶಾಲೆಗಳು ದುಸ್ಥಿತಿಯಲ್ಲಿವೆ. ಕನ್ನಡಿಗರಿಗೆ ಉದ್ಯೋಗವೇ ಸಿಗುತ್ತಿಲ್ಲ. ಪರಭಾಷಿಕರ ವಲಸೆ ಹೆಚ್ಚಾಗಿದೆ. ನ್ಯಾಯಾಲಯದಲ್ಲಿ ಇನ್ನೂ ಕನ್ನಡ ಕಡ್ಡಾಯವಾಗಿಲ್ಲ ಎಂದು ಕಿಡಿ ಕಾರಿದರು.

ಕರ್ನಾಟಕದಲ್ಲಿ ಮೊದಲು ಕನ್ನಡ ನಂತರ ಬೇರೆ ಭಾಷೆ. ರಾಜ್ಯದಲ್ಲಿ ಹಿಂದಿ ಹೇರಿಕೆ ಸಾಧ್ಯವಿಲ್ಲ. ಅಮಿತ್ ಷಾ ಅವರ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಿ. ಕೋಟಿ ಕಂಠ ಗಾಯನ ಕೇವಲ ಬೂಟಾಟಿಕೆ ಕಾರ್ಯಕ್ರಮ. ಮೊದಲು ರಾಜ್ಯದ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ, ಪದ ಬಳಕೆಯನ್ನು ಕಡ್ಡಾಯ ಮಾಡಲಿ. ಕೇಂದ್ರ ಪುರಸ್ಕೃತ ಹುದ್ದೆಗೆ ಕನ್ನಡ ಭಾಷೆ ಆದ್ಯತೆ ನೀಡಬೇಕು. ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಸವಲತ್ತುಗಳನ್ನು ನೀಡಬೇಕು.

ಕರ್ನಾಟಕದಿಂದ ಕೈ ಬಿಟ್ಟಿರುವ ಊಟಿ, ತಾಳವಾಡಿ, ಕಾಸರಗೋಡು, ಸೊಲ್ಲಾಪುರ ಮುಂತಾದ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನ.1ರಂದು ಕರಾಳ ದಿನಾಚರಣೆ ಆಚರಿಸುವ ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧ ಮಾಡಬೇಕು. ನ.1ರಿಂದ ಹಿಂದಿ, ತಮಿಳು, ಮಲಯಾಳಂ, ಭಾಷೆಗಳ ಚಿತ್ರ ಪ್ರದರ್ಶನ ರದ್ದುಗೊಳಿಸಬೇಕು. ಇಲ್ಲದಿದ್ದರೆ ಚಿತ್ರ ಮಂದಿರಕ್ಕೆ ಬೆಂಕಿ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಟಿಪ್ಪು ಎಕ್ಸ್‌ಪ್ರೆಸ್ ರೈಲುಗಾಡಿಯ ಹೆಸರನ್ನು ಬದಲಾವಣೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಇದನ್ನು ಒಡೆಯರ್ ಅವರು ವಿರೋಧ ಮಾಡಬೇಕಿತ್ತು. ಬೇಕಾದರೆ 4 ರೈಲುಗಾಡಿಗಳಿಗೆ ಒಡೆಯರ್ ಹೆಸರು ಇಡಲಿ ಆದರೆ, ಟಿಪ್ಪು ಹೆಸರು ಬದಲಾವಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಭಾಗವಹಿಸಿದ್ದರು.