ಹನೂರು: ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಬಂಧ ಭಾವನಾತ್ಮಕವಾದದು. ಪಾಲಕರ ಮಾತಿಗಿಂತ ಗುರುಗಳ ಮಾತಿಗೆ ಹೆಚ್ಚಿನ ಮನ್ನಣೆ ಇದೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಸೋಮವಾರ ಮಠದ ಹಿರಿಯ ಶ್ರೀ ಪಟ್ಟದ ಗುರು ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಮನೆಯಲ್ಲಿ ಮಾತು ಕೇಳದ ಮಕ್ಕಳಿಗೆ ಪಾಲಕರು ಮೇಷ್ಟ್ರುಗೆ ಹೇಳುತ್ತೇನೆ ಎಂದು ಹೆದರಿಸುತ್ತಿದ್ದರು. ಹಾಗೆಯೇ ಮಕ್ಕಳು ಸಹ ಗುರುಗಳ ಮಾತಿಗೆ ಮನ್ನಣೆ ನೀಡುತ್ತಿದ್ದರು. ಭಯ ಪಟ್ಟು ಶ್ರದ್ಧೆಯಿಂದ ಚೆನ್ನಾಗಿ ಓದುತ್ತಿದ್ದರು, ಕಲಿಯುತ್ತಿದ್ದರು. ಗುರುವಿನ ಹಾದಿಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದರು. ಗುರುವೆಂದರೆ ಮಕ್ಕಳಿಗೆ ಎಲ್ಲಿಲ್ಲದ ಗೌರವ. ಹಾಗಾಗಿ ಗುರು, ಶಿಷ್ಯರ ನಡುವಿನ ಸಂಬಂಧ ಭಾವನಾತ್ಮಕವಾಗಿತ್ತು. ಆದರೆ ಇತ್ತೀಚಿಗೆ ಬದಲಾವಣೆಯಾಗಿದೆ. ಆದರೂ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಗೌರವ ಭಾವನೆ ಹೊಂದುವುದರ ಮೂಲಕ ಸದಾ ಋಣಿಯಾಗಿರಬೇಕು ಎಂದು ತಿಳಿಸಿದರು.
ಮೈಸೂರು ಸಿಎಫ್‌ಟಿಆರ್‌ಐ ಹಿರಿಯ ವಿಜ್ಞಾನಿ ಕೊಳ್ಳೇಗಾಲ ಶರ್ಮಾ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಮ.ಬೆಟ್ಟದ ಮಹದೇಶ್ವರ ಶಾಲೆಯಲ್ಲಿ 30 ವರ್ಷಗಳವರೆಗೆ ನಿರಂತರ ಸೇವೆ ಸಲ್ಲಿಸಿದ ರಾಜೇಶ್ವರಿ ಅವರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಡೆಯರಪಾಳ್ಯ ಮಹದೇಶ್ವರ ಶಾಲೆಯ ಸುಗುಣಾ ಹಾಗೂ ಮ.ಬೆಟ್ಟ ಶಾಲೆಯ ಎಂ.ಎನ್ ಪ್ರಸಾದ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬಿಇಒ ಗುರುಲಿಂಗಯ್ಯ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಇದ್ದರು.