ಸಿರಗುಪ್ಪ: ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದ್ಬಳಕೆ ಆಗಬೇಕು ಎಂದು ಸಿವಿಲ್ ನ್ಯಾಯಾಧೀಶ ಅಶೋಕ ಆರ್.ಎಚ್ ಹೇಳಿದರು.
ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಅಂಗವಾಗಿ ದೇಶನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆಡಳಿತ, ತಾಪಂ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಯವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುತ್ತವೆ. ಇಂತಹ ಆಹಾರ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯವಂತ ಮಕ್ಕಳಿಂದ ಆರೋಗ್ಯಕರ ಸಮಾಜ ಕಟ್ಟಬಹುದು ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಉಪ್ಪಾರ ವೆಂಕೋಬ ಮಾತನಾಡಿ, ನಮ್ಮ ಅಜ್ಜ, ಅಜ್ಜಿ ಅವರ ಆಹಾರ ಪದ್ಧತಿಯಿಂದ ಯಾವುದೇ ಕಾಯಿಲೆಗಳು ಬರುತ್ತಿರಲಿಲ್ಲ. ಅವರ ಜೀವನ ಶೈಲಿ ಇಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದರು.
ಪಿಡಿಒ ಅನ್ನಪೂರ್ಣ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್, ವಕೀಲರ ಸಂಘದ ಉಪಾಧ್ಯಕ್ಷ ಎಂ.ಶರೀಫ್ ಸಾಬ್, ಕಾರ್ಯದರ್ಶಿ ಎಂ.ಶಿವಕುಮಾರ, ವಕೀಲರಾದ ಮಂಜುಳಾ, ಅಬ್ದುಲ್ ರಾರಾವಿ, ಮಲ್ಲಿಗೌಡ, ಮಹೇಶ, ವೆಂಕಟೇಶನಾಯ್ಕ ಇತರರಿದ್ದರು.